Tuesday, March 25, 2008

ಈ ವೀಕೆಂಡಿಗೆ ಒಂದಷ್ಟು ಕನ್ನಡ ಹಾಡುಗಳು, ನೃತ್ಯ, ಫ್ಯೂಶನ್ ಸಂಗೀತ

ಎನ್ ಎಂ ಕೆ ಆರ್ ವಿ ಕಾಲೇಜಿನ ಮಂಗಳಮಂಟಪ ಸಭಾಂಗಣದಲ್ಲಿ ಈ ಭಾನುವಾರ, ೩೦ ಮಾರ್ಚ್ ೨೦೦೮ರ ಸಂಜೆ ೬ಕ್ಕೆ ’ವಿದ್ಯುತ್’(Vidyouth) ಅನ್ನೋ ಹೊಸ ಸಾಂಸ್ಕೃತಿಕ ತಂಡ ವೇದಿಕೆಯೇರಲಿದೆ.

ಕಾಲೇಜು ಸ್ಪರ್ಧೆಗಳಲ್ಲಿ ಸಿಗುತ್ತಾ ಒಟ್ಟಾದ ಈ ತಂಡ ಈಗ ಪ್ರೊಫೆಶನಲ್ ಘಟ್ಟಕ್ಕೆ ಕಾಲಿಡುತ್ತಿದೆ. ಸುಗಮಸಂಗೀತ(ಕನ್ನಡ), ನೃತ್ಯ, ಫ್ಯೂಶನ್ - ಹೀಗೆ ಮೂರು ಪುಟ್ಟ ತಂಡಗಳು ಅಂದು ನಿಮ್ಮ ಮುಂದಿರುತ್ತವೆ. ಫ್ಯೂಶನ್ ತಂಡದ ಹುಡುಗರು ನನ್ನ ಅತ್ಮೀಯ ವಲಯಕ್ಕೆ ಸೇರಿದವ್ರಾದರಿಂದ ಇಲ್ಲಿ ಅವರ ಪರವಾಗಿ ನಿಮಗೆ ಆಹ್ವಾನ. ಬೆಂಗಳೂರಿನ ಶಾಸ್ತ್ರೀಯ ಸಂಗೀತದ ಶ್ರೋತೃಗಳಿಗೆ ಇವರ ಪರಿಚಯ ಇದ್ದೀತು: ಬಿ ಕೆ ರಘು - ವಯೊಲಿನ್, ಶಕ್ತಿಧರ್- ಬಾನ್ಸುರಿ, ಅಶ್ವಿನ್ - ಕೀಬೋರ್ಡ್, ಆದರ್ಶ್ ಶೆಣೈ - ತಬಲಾ, ಮಂಜುನಾಥ್ - ಡ್ರಮ್ಸ್, ಹಾಗೂ ಅದಮ್ಯ(ನನ್ನ್ ತಮ್ಮ) - ಮೃದಂಗ.
ಸುಗಮಸಂಗೀತದಲ್ಲಿ: ಚಿನ್ಮಯ್ ಆತ್ರೇಯಸ್, ಶೃತಿ, ಮಯೂರ್ ರಾಘವೇಂದ್ರ ಹಾಗೂ ಮೇಘನಾ ಕುಲಕರ್ಣಿ
ನೃತ್ಯದಲ್ಲಿ: ನಿಖಿಲಾ, ಸಿಂಧು ಜೆ., ಚೇತನಾ, ಸಿಂಧು, ಗೌರಿ, ಮೇಘನಾ.
ರೂ 49/-ರ ಟಿಕೆಟ್‍ಗಳು ದೊರೆಯುವ ಸ್ಥಳಗಳು:
ಜಯನಗರದ ಕ್ಯಾಲಿಪ್ಸೋ, ಶೆಣೈ ಮೆಡಿಕಲ್ಸ್

ಈ - ಮೈಲ್ ಮೂಲಕ ಟಿಕೆಟ್ ಕಾದಿರಿಸಬಯಸುವವರು ನಿಮ್ಮ ದೂರವಾಣಿ ಸಂಖ್ಯೆಯೊಂದಿಗೆ rhythmadamya at yahoo dot co dot inಗೆ ಮೈಲ್ ಕಳಿಸಿ.

ಕಾರ್ಯಕ್ರಮ ನಡೆಯುವ ಸ್ಥಳ: ’ಮಂಗಳ ಮಂಟಪ’
ಎನ್ ಎಂ ಕೆ ಆರ್ ವಿ ಕಾಲೇಜು
ಜಯನಗರ, ಬೆಂಗಳೂರು
ದಿನಾಂಕ: 30 ಮಾರ್ಚ್ 2008
ಸಮಯ: ಸಂಜೆ 6 ಘಂಟೆ


ಅಂದ ಹಾಗೆ ಈ ಬ್ಲಾಗ್ ಷುರು ಮಾಡೋವಾಗ ಹೆಸರಿಡೋಕೆ ಸುಮಾರು ತಲೆ ಕೆಡ್ಸ್ಕೊಂಡು ಕೊನೆಗೆ ’ನನ್ನ ಹಾಡು’ ಅಂತ ಇಟ್ಟ್‌ಬಿಟ್ಟೆ... ಅಂಥಾ ಕ್ರಿಯೇಟಿವ್ ಆಗೇನ್ ಇಲ್ಲ ಅನ್ನಿಸಿದ್ರೂ ಇನ್ನು ಯೋಚನೆ ಮಾಡೋಕೆ ಆಗದ್ ಸೋಮಾರಿತನದಲ್ಲಿ! ಆ ಹೆಸ್ರಲ್ಲಿ ಇನ್ನೊಂದು ಬ್ಲಾಗ್ ಇರೋದು ಈಚೆಗೆ ಗೊತ್ತಾಯ್ತು. ಬ್ಲಾಗ್‌ಲೋಕದ ತುಂಬಾ ಇರೋ ಶ್ರೀಗಳಿಂದ ನಾ ಐಡೆಂಟಿಟಿ ಕ್ರೈಸಿಸ್ ಎದುರಿಸೋದೇ ಸಾಕು, ನನ್ನ ಈ ಪುಟ್ಟ ಹೊಸ ಬ್ಲಾಗಿಗೆ ಆ ಪಾಡು ಬೇಡ ಅಂತ ಇದರ ಯು ಆರ್ ಎಲ್ - ಶ್ರೀ ರಾಗವನ್ನೇ ಹೆಸರಾಗಿಸ್ತಿದೀನಿ.

Wednesday, March 5, 2008

ಜೂಠೇ ನೈನಾ ಬೋಲೇ..., ಪಂ. ಸತ್ಯಶೀಲ್ ದೇಶಪಾಂಡೆ, ವರಾಳಿ

ಹಿಂದೆ ಯಾವಾಗ್ಲೋ ದೀಪ್ತಿಯ ಹಳೆಯ ಬ್ಲಾಗ್‌ನಲ್ಲಿ ಆಡಿಯೋ ಲಿಂಕ್ ನೋಡಿ ಆಹ್ ಈ ಹುಡುಗಿಯ ದನಿ ಕೇಳೋ ಭಾಗ್ಯ ಸಿಕ್ತಲ್ಲಾ ಅಂತ ಕ್ಲಿಕ್ ಮಾಡಿದಾಗ ’ಲೇಕಿನ್’(೧೯೯೧) ಚಿತ್ರದ "ಜೂಠೇ ನೈನಾ ಬೋಲೆ..." ತೇಲಿತ್ತು, ಆಶಾ ಭೋಂಸ್ಲೆಯವರ ದನಿಯಲ್ಲಿ. ನಂ ಹುಡುಗಿಯ ದನಿ ಕೇಳಲಾಗ್ಲಿಲ್ಲ ಅನ್ನೋ ನಿರಾಸೆಯನ್ನೂ ಮೀರಿ ಕೊಚ್ಚಿಕೊಂಡು ಹೋಗಿತ್ತು ಆ ಹಾಡು! ಸ್ಕೂಲ್ ದಿನಗಳಲ್ಲಿ ವಿವಿಧಭಾರತಿ ಕೇಳ್ತಾ ಯಾವಾಗ್ಲೋ ಆಹ್ ಅನ್ನಿಸಿದ್ದ್ ಹಾಡು. ಆಗ ಯಾವ ಫಿಲ್ಮ್‌ದು ಅಂತ ತಿಳಿದುಕೊಂಡು ಮತ್ತೆ ಹುಡೂಕೋ ಅಷ್ಟು ತಲೆ ಓಡಿಸ್ತಿರಲಿಲ್ಲವಾದ್ದರಿಂದ ಕಳೆದುಹೋಗಿದ್ದ ಹಾಡು. ಸರಿ ದೀಪ್ತಿಯಿಂದ ಸಿಕ್ಕಿರೋ musical giftಗಳಿಗೆ ಇನ್ನೊಂದು ಸೇರ್ಕೊಳ್ತು!

ಸರಿ, ಅದನ್ನ ಮತ್ತೆ ಮತ್ತೆ ಕೇಳೋಕೆ http://www.musicindiaonline.comನಲ್ಲಿ/ ಹುಡುಕಿದ್ದಾಯ್ತು. ಹಾಡಿನ ಪ್ರಾರಂಭಕ್ಕೆ, ಹಾಗೂ ಮಧ್ಯದಲ್ಲಿ ಬರೋ male voice ಪಂ. ಕುಮಾರ್ ಗಂಧರ್ವರ ಶಿಷ್ಯರೂ, ಪ್ರಸಿದ್ಧ ಸಂಗೀತಜ್ಞ ವಾಮನ್ ರಾವ್ ದೇಶಪಾಂಡೆಯವರ ಮಗನೂ ಆದ ಪಂಡಿತ್ ಸತ್ಯಶೀಲ್ ದೇಶಪಾಂಡೆಯವರದ್ದು ಅಂತ ಗೊತ್ತಾಯ್ತು. ಸಂಗೀತಪ್ರಿಯರಾದ ನನ್ನ ಬಾಸ್ - ಅನ್‌ಮೋಲ್, ನಾ ಕೆಲಸಕ್ಕೆ ಸೇರಿದ ಕೆಲದಿನಗಳಲ್ಲೇ ಇದನ್ನ ಕೇಳಿನೋಡು ಅಂತ ಪಂಡಿತ್‌ಜೀಯ ’ಕಹೇಂ’ ಸಿ ಡಿ ಕೈಗಿಟ್ಟಿದ್ದರು. ಅವರ ಮನೆಯಲ್ಲೇ ಸತ್ಯಶೀಲ್‌ರ ಸಂಗೀತ ಮೊದಲಬಾರಿಗೆ ಕೇಳೋ ಅವಕಾಶ ಸಿಕ್ಕಿದ್ದು.

ಇದು ೨-೩ ವರ್ಷದ ಹಿಂದಿನ ಮಾತು. ಇತ್ತೀಚೆಗೆ ಬಿಲಾಸ್‌ಖಾನಿ ತೋಡಿ ಹುಚ್ಚು ಹತ್ತಿಸಿಕೊಂಡು ತಿರುಗುತ್ತಿದ್ದಾಗ ಮತ್ತೆ ಈ ಹಾಡಿಗೆ revisit... ಹಿಂದೂಸ್ತಾನಿ ಸಂಗೀತ ಕಲಿತು, ಕೇಳಿ ಸಾಕಷ್ಟು ಅನುಭವವಿದ್ದ ಅನ್‌ಮೋಲ್‌ರ ಹತ್ತಿರ ಬಿಲಾಸ್‌ಖಾನಿಯ ಬಗ್ಗೆ ಮಾತಾಡ್ತಾ ಸತ್ಯಶೀಲ್ ಹಾಡಿದ್ದ ಈ ಹಾಡು ಅದೇ ರಾಗದ್ದಲ್ಲವಾ ಅಂತ confirm ಮಾಡಿಕೊಂಡಿದ್ದೆ. ಇದಾಗಿ ೨-೩ ತಿಂಗಳಾಗಿರಬಹುದು. ಅನ್‌ಮೋಲ್‌ರಿಂದ ಸತ್ಯಶೀಲ್‌ರ ಕಚೇರಿಗೆ ಆಹ್ವಾನ ಬಂತು. ಬೆಂಗಳೂರಿನ ಸ್ಮೃತಿನಂದನ್ ಸಭಾಂಗಣದಲ್ಲಿ ಮೊನ್ನೆ ಭಾನುವಾರ ಕಾರ್ಯಕ್ರಮ. ಮಧುವಂತಿ, ಯಮನ್ ಕಲ್ಯಾಣ್, ಕಾಮೋದ್, ಅಪರೂಪದ ರಾಗ ನಂದ್...ರಾಗಸುಧೆ ಹರಿದಿತ್ತು. ಕಚೇರಿಯ ನಂತರ ಪಂಡಿತ್‌ಜೀಯವರ ಜೊತೆ ಕೆಲವು ಸಮಯ ಕಳೆಯೋ ಅವಕಾಶ. ಗೆಳೆಯರೊಬ್ಬರ ಮನೆಯಲ್ಲಿ ಊಟ. ಅಲ್ಲಿ ಹೋಗುತ್ತಲೇ ಸತ್ಯಶೀಲ್ ಮತ್ತೆ ಸಂಗೀತದ ಮೂಡ್‌ಗೆ ಇಳಿದರು. ಅಂದು ಹಾಡಿದ್ದ ರಾಗಗಳನ್ನ ಮೆಲುಕು ಹಾಕ್ತಾ, ಬೇರೆ ಬೇರೆ ಸಂಗೀತಗಾರರ approachಗಳನ್ನ ವಿವರಿಸ್ತಾ, ಹಾಡ್ತಾ... ಗಂಧರ್ವಲೋಕ ತೆರೆದಿತ್ತು.

೩ ತಿಂಗಳ ಹಿಂದಿನ ಮಾತು ನೆನಪಿಸಿಕೊಂಡ ಅನ್‌ಮೋಲ್, ಸತ್ಯಶೀಲ್‌ರಿಗೆ ನನ್ನ ’ಜೂಠೆ ನೈನಾ ಬೋಲೆ’ ಪ್ರೀತಿಯ ಬಗ್ಗೆ ಹೇಳಿ, she wants to listen to your bilaskhani todi ಅಂದುಬಿಟ್ಟರು! ಮಗುವಿನಂತಹ ಮುಗ್ಧತೆಯ ಪಂಡಿತ್‌ಜೀ ತಕ್ಷಣ ಆ ಹಾಡಿನ ಪ್ರಾರಂಭದ ’ನೀಕೇ ಘೂಂ...’ ಷುರುಮಾಡಿಯೇ ಬಿಟ್ಟರು! ನನಗೆ ಸ್ವರ್ಗಕ್ಕೆ ಮೂರೇ ಗೇಣು!! ಆ ಖುಷಿಯಲ್ಲಿದ್ದಾಗಲೇ ’ಗಾವೋ’ ಅಂತ ನನಗೂ, ಅಲ್ಲೇ ಇದ್ದ ಅವರ ಮಗ ಸೃಜನ್‍‍ಗೂ ಒಂದೊಂದೇ ಸಾಲು ಹೇಳಿಕೊಡೋಕೆ ಷುರು ಮಾಡಿದ್ರು! ಸ್ವರ್ಗ ಕೈಯ್ಯಲ್ಲಿತ್ತು! ಇದಕ್ಕಿಂತ ಇನ್ನೇನು ಕೇಳಲಿ ಅಂದುಕೊಂಡೆ.

ಆದ್ರೆ ಅವತ್ತು ಪಂಡಿತ್‌ಜೀ ನನ್ನ ಸಂತಸದ ಮೇರೆಗಳನ್ನ ದಾಟಿಸ್ತೀನಿ ಅಂತ ನಿರ್ಧರಿಸಿಬಿಟ್ಟಿದ್ದರು! ಬಿಲಾಸ್‌ಖಾನಿ ತೋಡಿ ಮುಗೀತಿದ್ದ ಹಾಗೇ ’ಅಬ್ ಕುಛ್ ಕರ್ನಾಟಕೀ ಸುನಾವೋ’ ಅಂದ್ರು. ನಾನು ಪೆದ್ದುಪೆದ್ದಾಗಿ ’ಯಮನ್ ಕಲ್ಯಾಣಿ’? ಅಂದೆ. ಬೇಡ ’ಒರಿಜಿನಲ್ ಕರ್ನಾಟಕೀ’ ಹಾಡು ಅಂದ್ರು. ’ಶುಭಪಂತುವರಾಳಿ’ ಅಂದೆ. ಸರಿ ಅಂತಿದ್ದ ಹಾಗೇ ’ಅದು ನಿಮ್ಮ ಮಿಯಾ ಕಿ ತೋಡಿಗೆ ಸಿಮಿಲರ್ ಅನ್ಸುತ್ತೆ' ಅಂದೆ. 'ತುಮ್ ಲೋಗ್ ಸಿಮಿಲರ್ ಕ್ಯೂ ಗಾತೇ ಹೋ, sing some proper carnatic raag' ಅನ್ನುತ್ತಾ ನಮ್ಮ ತ್ಯಾಗರಾಜರ ಘನಪಂಚರತ್ನಗಳಲ್ಲಿ ನನ್ನ ಫೇವರಿಟ್ ಆದ ’ಕನಕನ ರುಚಿರಾ...’ ಹಾಡೋಕೆ ಪ್ರಾರಂಭಿಸಿಬಿಟ್ಟರು!! ಒಂದು ಕ್ಷಣ ದಿಗ್ಭ್ರಮೆಯಲ್ಲಿ ಕಳೆದುಹೋದೆ! ಸಾವರಿಸಿಕೊಳ್ತಾ ಸರಿ, ಆ ರಾಗದಲ್ಲೇ ಏನಾದ್ರು ಹಾಡ್ತೀನಿ ಹಾಗಾದ್ರೆ ಅಂದೆ. ಖುಷಿಯಿಂದ ಹೂ ಅಂದ್ರು. ಮುತ್ತುಸ್ವಾಮಿ ದೀಕ್ಷಿತರ ’ಮಾಮವ ಮೀನಾಕ್ಷೀ’ ಹಾಡುತ್ತಿದ್ದಂತೆ ಷಡ್ಜದಿಂದ ಪಂಚಮಕ್ಕೆ ಬರುವ ಜಲಪಾತದಂಥಾ ಬ್ರಿಗಾ ಸಂಚಾರ, ಗಾಂಧಾರದ ಸೂಕ್ಷ್ಮವಾದ ಕಂಪಿತಗಳನ್ನ ಆಸ್ವಾದಿಸ್ತಾ, ಮಗನಿಗೆ ಇದನ್ನ ಗಮನಿಸು, ಅದನ್ನ ಗಮನಿಸು ಅಂತ ಹೇಳ್ತಾ ಕೂತ ಪಂಡಿತ್‌ಜೀ ದೊಡ್ಡವರ ದೊಡ್ಡತನದ ಪ್ರತೀಕವಾಗಿದ್ದರು.

ಹಾಡಿ ಮುಗಿಸಿದಾಗಲೂ ನಮ್ಮ ಪಂಚರತ್ನಕೃತಿಯಬಗ್ಗೆ ಇನ್ನೊಂದು ಪದ್ಧತಿಯ ಅಷ್ಟು ಹಿರಿಯಕಲಾವಿದರ ಪ್ರೀತಿ ಅಚ್ಚರಿಯಲ್ಲಿ ಮುಳುಗಿಸಿತ್ತು! ಜೊತೆಗೇ ನಮ್ಮ ಕೃತಿಗಳ ಅದ್ಭುತ ಭಂಡಾರದ ಬಗ್ಗೆ ಹೆಮ್ಮೆಯೆನಿಸಿತ್ತು!!

compositionಗಳಿಗೆ ಅಷ್ಟು ಪ್ರಾಮುಖ್ಯ ನೀಡದ ಹಿಂದೂಸ್ತಾನಿ ಪದ್ಧತಿಯಲ್ಲಿ oral traditionನ ಮೇಲೇ ಅವಲಂಬಿತವಾಗಿ ಅಲ್ಲಲ್ಲಿ ಉಳಿಯುತ್ತಾ ಅಲ್ಲಲ್ಲಿ ನಶಿಸುತ್ತಾ ಹೋಗುತ್ತಿರುವ compositionಗಳನ್ನ ಹುಡುಕಿ, ಹಿರಿಯ ಸಂಗೀತಗಾರರಿಂದ ಹಾಡಿಸಿ, notation ಸಿಕ್ಕಲ್ಲಿ ಅದನ್ನು ಕಾಯ್ದಿಡುವ ದೊಡ್ಡ ಸಂಶೋಧನೆ-ಸಂಗ್ರಹಗಳ ಕೆಲಸವನ್ನ ಸತ್ಯಶೀಲ್‌ರು ಮುಂಬೈನಲ್ಲಿರುವ ತಮ್ಮ ’ಸಂವಾದ್ ಫೌಂಡೇಷನ್’ನ ಮೂಲಕ ಮಾಡ್ತಿದಾರೆ (ಕೃತಿಗಳ ಬಗ್ಗೆ ಅವರ ಆಸಕ್ತಿಯ ಮೂಲ ಇದೇ ಇರಬಹುದು!). ಇಲ್ಲಿ ಸುಮಾರು ೮೦೦೦ಗಘಂಟೆಗಳಷ್ಟು ಧ್ವನಿಮುದ್ರಿಕೆಗಳೂ, ೩೦೦೦ದಷ್ಟು manuscript notationಗಳೂ ಇವೆಯಂತೆ. ಮಾಹಿತಿಗಾಗಿ http://www.satyasheel.com/ ನೋಡಿ.

ಅಂದಹಾಗೆ ಲೇಕಿನ್‌ನ ಹಾಡನ್ನ ’ಝೂಟೇ ನೈನಾ’ ಅಂದುಕೊಂಡಿದ್ದೆ, ಅದು ’ಜೂಠೇ ನೈನಾ’(ಜೂಠಾ=ಎಂಜಲು) , ಹೊರಗೆಲ್ಲೋ ಅಲೆದು ಬಂದು ಕತ್ತಲ ರಾತ್ರಿಯ ಚಂದ್ರನಂತೆ ಮಿಂಚುತ್ತಿರೋ ಮಳ್ಳ ಕಣ್ಣುಗಳು ಅಂತ ಪಂಡಿತ್‌ಜೀ ವಿವರಿಸಿದ್ರು!:)

[P.S.,: ಲೇಕಿನ್‌ನ ಹಾಡಿಗೆ ಹಾಗೂ ’ಕನಕನರುಚಿರಾ’ಗೆ musicindiaonlineನ ಲಿಂಕ್‌ಗಳನ್ನ ಕೊಟ್ಟಿದ್ದೀನಿ, ಹಾಡಿನ ಮೇಲೆ ಕ್ಲಿಕ್ ಮಾಡಿ ಕೇಳಬಹುದು. ಇಂದಿನ ಪ್ರಮುಖ ಸಂಗೀತಗಾರರ ಸಾಲಿನಲ್ಲಿರೋ ಸಂಜಯ್ ಸುಬ್ರಮಣ್ಯಂ ಹಾಗೂ ಉನ್ನಿಕೃಷ್ಣನ್ ಒಟ್ಟಿಗೆ ಹಾಡಿರುವ ’ಕನಕನ ರುಚಿರಾ’ ತುಂಬಾ ಚೆನ್ನಾಗಿದೆ. ಅದನ್ನ ಹುಡುಕ್ತಿದ್ದೆ, ಸಿಗಲಿಲ್ಲ. ಅದರ ಬದಲು ನಮ್ಮ ಭೀಷ್ಮ ಪಿತಾಮಹ ಶೆಮ್ಮಂಗುಡಿಯವರ ಹಾಡಿಕೆಯಲ್ಲಿ ಕೇಳಿಸ್ತಿದ್ದೀನಿ. ಮೇಲೆ ಹೇಳಿರೋ ಡ್ಯೂಯೆಟ್ ಸಿಕ್ಕರೆ ಕೇಳಿ]