Tuesday, January 29, 2008

ಎಂ ಎಸ್ ಬದುಕು - ಒಂದು ಸುಂದರ ಕಥೆ

ಕರ್ನಾಟಕ ಸಂಗೀತ ಭಕ್ತಿಪ್ರಧಾನ ಅಂತ ಹೇಳೋ ಗೆಳತಿಯ ಜೊತೆ ಗಂಟೆಗಟ್ಟಲೆ ದಿನಗಟ್ಟಲೆ ಗುದ್ದಾಡ್ತೀನಿ, socio-polictical, cultural, historical ಕಾರಣಗಳು, ನಿದರ್ಶನಗಳು ಹಾಗೆ ಹೀಗೆ... ಮುಗಿಯದ ಯುದ್ಧ, the best way to kill time that I perhaps know! ಅದೇ ಕರ್ನಾಟಕ ಸಂಗೀತದಲ್ಲಿ ಭಕ್ತಿ ಅಂದ ತಕ್ಷಣ ಎಲ್ಲರ ಕಣ್ಣ್ಮುಂದೆ ಬರೋ ಎಂ ಎಸ್ ಸುಬ್ಬುಲಕ್ಷ್ಮಿಯವರ ಬಗ್ಗೆ ಬರೆದ ಈ ಸಾಲುಗಳನ್ನ ಓದುತ್ತಿದ್ದಾಗ ಮಾತ್ರ ಕಣ್ಣುತುಂಬಿ ಬಂದುಬಿಡತ್ತೆ!:

"At the time of the UN concert, the couple stayed at the apartment of an Esso oil company, another Mylapore networker. After lunch one day MS began singing for the small gathering of friends who had assembled in the apartment. To their dismay, repair works in the adjoining apartment provided a staedy accompaniment of unmusical sounds such as hammer knocks and metal sawinf. The apartment owner was embarrassed but said he was helpless. MS alone seemed unconcerned and went on singing. A few minutes later, the repair noises suddenly ceased and two helmeted American handymen appeared at the apartment door. 'Can't understand a thing,' they said, 'but it's very touching. May we listen?' That was perhaps MS's finest hour in America."

ಟಿ ಜೆ ಎಸ್ ಜಾರ್ಜ್ ಬರೆದಿರುವ ’MS: A Life in Music' ಪುಸ್ತಕದ ಸಾಲುಗಳಿವು. ಎಂ ಎಸ್ ತಮ್ಮ ಯೌವ್ವನದ ದಿನಗಳಲ್ಲಿ ಮತ್ತೊಬ್ಬ ಪ್ರಚಂಡ ಕಲಾವಿದ ಜಿ ಎನ್ ಬಿಯವರಿಗೆ ಬರೆದ ಪ್ರೇಮಪತ್ರಗಳ ಉಲ್ಲೇಖದಿಂದ ಸುದ್ದಿಯಾಗಿದ್ದ ಈ ಪುಸ್ತಕವನ್ನ ತುಂಬಾ ದಿನಗಳಿಂದ ಓದ್‌ಬೇಕು ಅಂದ್ಕೋತಿದ್ದೆ. ನನ್ನ ಗುದ್ದಾಟದ ಪಾರ್ಟ್‌ನರ್ ಗೆಳತಿ ಉಡುಗೊರೆಯಾಗಿ ಈ ಪುಸ್ತಕವನ್ನೇ ಕೈಗಿಟ್ಟಾಗ ನನ್ನ ಸೋಮಾರಿತನಕ್ಕೆ ಒಂದು ಬ್ರೇಕ್ ಕೊಡಬೇಕಾಯ್ತು!

ಮಧುರೈನ ಸೀಮಿತ ಪರಿಸರದಲ್ಲಿ ತಂಬೂರಿಯ ಶ್ರುತಿಯೊಂದಿಗೆ ಆಡುತ್ತಾ ಬೆಳೆಯುವ ಪುಟ್ಟ ಎಂ ಎಸ್, ಹತ್ತು ವರ್ಷದ ಪೋರಿ ಗ್ರಾಮಫೋನ್ ಹೀರೊಯಿನ್ ಆದದ್ದು, ಆ ವಯಸ್ಸಿಗೆ, ಅಂದಿನ ಕಾಲಕ್ಕೆ, ನಮಗೆಲ್ಲ ಪರಿಚಯವಿರೋ ಎಂ ಎಸ್ ಅವರ ಸೌಮ್ಯ ವ್ಯಕ್ತಿತ್ವಕ್ಕೆ ಅಚ್ಚರಿಯೆನಿಸೋ ಅಷ್ಟು ದಿಟ್ಟ ನಿರ್ಧಾರಗಳು... ಬದುಕಿನ ಹಾದಿ ತನ್ನ ಕೈಮೀರುತ್ತಿದೆಯೆನಿಸಿದಾಗ ರಾತ್ರೋರಾತ್ರಿ ರೈಲು ಹತ್ತಿ ಚೆನ್ನೈನಲ್ಲಿಳಿದುಬಿಡುವ ದಿಟ್ಟತನ-ಮುಗ್ಧತೆಗಳ ಅದ್ಭುತ ಸಮ್ಮಿಳನ... ಮಧುರೈನ ದೇವದಾಸಿಕುಟುಂಬದಲ್ಲಿ ಬೆಳೆದ ಹುಡುಗಿ ಮದ್ರಾಸಿನ ಸಂಗೀತಸಾಮ್ರಾಜ್ಞಿಯಾಗೋದರ ಜೊತೆ ಐಯ್ಯರ್ ಐಕಾನ್ ಆಗಿ ರೂಪಾಂತರಗೊಂಡದ್ದು... ದೇಶಾದ್ಯಂತ ಕಚೇರಿಗಳು, ವಿದೇಶಪ್ರವಾಸಗಳು, ವಿವಿಧಕ್ಷೇತ್ರಗಳ ಘಟಾನುಘಟಿಗಳ ಸಂಪರ್ಕ,ಪ್ರಶಸ್ತಿ-ಪುರಸ್ಕಾರಗಳು...ಎಲ್ಲದರ ನಡುವೆ ಸಂಗೀತವನ್ನ ಭಕ್ತಿಯ ಅಭಿವ್ಯಕ್ತಿಯಾಗಿ ಆರಾಧಿಸುತ್ತ ಕಡೆತನಕ ಮುಗ್ಧತೆಯ ಪ್ರಶಾಂತ ದ್ವೀಪವಾಗಿಯೇ ಉಳಿದ ಎಂ ಎಸ್... ಪುಸ್ತಕ ಓದಿಸಿಕೊಳ್ತಾ ಹೋಯ್ತು.

ಒಣಜೀವನಚರಿತ್ರೆಯಾಗಿಸದೇ, ಅಂದಿನ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳನ್ನ, ಟ್ರೆಂಡ್‌ಗಳನ್ನ, ಬದಲಾವಣೆಗಳನ್ನ ತೆರೆದಿಡುತ್ತಾ, ಅವುಗಳ ಹಿನ್ನೆಲೆಯಲ್ಲಿ ಎಂ ಎಸ್ ಕಥೆ ಹೇಳುತ್ತಾ ಸಾಗುವ ಜಾರ್ಜ್ ಶೈಲಿ ಅಪ್ಯಾಯಮಾನವೆನಿಸ್ತು. ಇಂದಿನ ಕಲಾವಿದರ ಬಗ್ಗೆ ಬರಿಯುವಾಗ ಸ್ವಲ್ಪ ’ಹಿಂದೊಂದು ಚೆಂದದ ಕಾಲವಿತ್ತು’ ಮೋಡ್‌ಗೆ ಜಾರುತ್ತಾರೆ ಎನಿಸಿದರೂ ಈ ಪುಸ್ತಕ ಕಲ್ಚರಲ್ ಹಿಸ್ಟರಿ ಅಧ್ಯಯನಕ್ಕೆ ಒಂದು ಅಮೂಲ್ಯ ಕೊಡುಗೆ ಅನ್ನೋದರಲ್ಲಿ ಸಂಶಯ ಇಲ್ಲ.

ಜಿ ಎನ್ ಬಿ-ಎಂ ಎಸ್ ಅಧ್ಯಾಯ ಎಂ ಎಸ್ ಬಗೆಗಿನ ಗೌರವಕ್ಕೆ ಮೆರುಗು ನೀಡಿತೇ ಹೊರತು ಯಾವುದೇ ಚೀಪ್ ಗಾಸಿಪ್‌ನ ಹಾದಿ ತುಳಿದಿಲ್ಲ. ಅದನ್ನ ವಿವಾದಕ್ಕೆ ತಿರುಗಿಸಿದವರ, ಹೀಗೆಲ್ಲಾ ಬರೀತಾರಾ, ಇವೆಲ್ಲ ಬರೀಬೇಕಾ ಅಂದವರ ಬಗ್ಗೆ ಏನ್ ಹೇಳ್ಬೇಕೊ ಗೊತ್ತಿಲ್ಲ! ನನಗಂತೂ ಎಂ ಎಸ್ ಜೀವನದ ಈ ಅಧ್ಯಾಯದಲ್ಲಿ ಎದ್ದುಕಾಣೋ ಅವರ ಭಾವತೀವ್ರತೆ, ಆಮೇಲಿನ ನಿರ್ಧಾರದ ಧೃಡತೆ ಅವರು ಎಂಥಾ Strong Woman ಆಗಿದ್ದರು ಅನ್ನೋದನ್ನ ಅರ್ಥ ಮಾಡ್ಕೊಳ್ಳೋದಿಕ್ಕೆ ಅತ್ಯವಶ್ಯ ಅನ್ನಿಸ್ತು, ಎಂ ಎಸ್ ಮನಸ್ಸಿಗೆ ಇನ್ನೂ ಹತ್ತಿರ ಅನ್ನಿಸಿದ್ರು, ಇನ್ನೂ ಎತ್ತರ ಅನ್ನಿಸಿದ್ರು!

ಎಂ ಎಸ್ ಬಗೆಗಿನ ಪುಸ್ತಕ ಅಂದಮೇಲೆ ಅವರ ದಿವ್ಯಕಳೆಯ ಫೋಟೋಗಳೂ ಇದ್ದೇ ಇವೆ. ಒಟ್ಟಿನಲ್ಲಿ ಕಲೆ-ಸಂಸ್ಕೃತಿಗಳಲ್ಲಿ ಆಸಕ್ತಿ ಇರೋವ್ರು ಓದಲೇಬೇಕಾದ ಪುಸ್ತಕ.

2004ರಲ್ಲಿ ಹೊರಬಂದ ಈ ಪುಸ್ತಕ ಹಾರ್ಪರ್ ಕಾಲಿನ್ಸ್ ಹಾಗೂ ಇಂಡಿಯಾ ಟುಡೇ ಸಮೂಹದ ಪ್ರಕಟಣೆ.

Sunday, January 27, 2008

ಹೊಸ ಹಾಡು

ನನ್ನ ಹಾಡು ಅಂದ್ರೆ ಏನಪ್ಪಾ ಇವಳು ಕಿರ್ಚಿಕೊಳ್ಳೋದನ್ನ ದಿನಾ ಇಲ್ಲಿ ಬಂದು ನಾವು ಕೇಳಿ ಅನುಭವಿಸಬೇಕಾ ಅಂತ ಗಾಬ್ರಿ ಆಗಿಬಿಟ್ಟ್ರಾ? ಯೋಚ್ನೆ ಮಾಡಬೇಡಿ, ಈ ಬ್ಲಾಗ್‌ಗೆ ಅಂಥಾ ಭಯಾನಕ ಲಿಮಿಟೆಡ್ ಅರ್ಥ ಇಲ್ಲ!:)

ಹಲವು ಸಲ ನಾವು ಕೇಳಿದ್ ಹಾಡು, ನೋಡಿದ್ ನೋಟ, ಓದಿದ್ ಸಾಲು ದುಂಬಿಯಂತೆ ಮನಸ್ಸಲ್ಲಿ ಗುಯ್ಗುಡ್ತಾ ಇರತ್ತೆ. ಬೆಳಿಗ್ಗೆ ಕೇಳಿದ ಯಾವ್ದೋ ಟಪ್ಪಾಂಗೂಚಿ ಹಾಡು ರಾತ್ರಿ ವರೆಗೂ ಗುನುಗಿ ಮನೆಯವರಿಗೆಲ್ಲಾ ತಲೆಚಿಟ್ಟ್ ಹಿಡ್ಸೋದ್ರಲ್ಲಿ ನಾನು ಎಕ್ಸ್‌ಪರ್ಟು! ಹೀಗೆ ಕಾಡೋ ಕೆಲವು ಹಾಡುಗಳಿಗೆ, ಸಂಗೀತಸಾಗರದಲ್ಲಿ ನನ್ನ ಬೊಗಸೆಗೆ ಸಿಗುವ ಕೆಲವು ಹನಿಗಳಿಗೆ ಇಂದಿನಿಂದ ಇಲ್ಲೊಂದು ಪುಟ್ಟಮನೆ. ಕಚೇರಿಗಳು, ಕಲಾವಿದರು, ಪುಸ್ತಕಗಳು... ನನ್ನ ಮನದ ಬಾಗಿಲು ತಟ್ಟೋ ಎಲ್ಲ ಸ್ವರಗಳಿಗೆ ಇಲ್ಲಿ ಅಭಿವ್ಯಕ್ತಿ.

ಅಮ್ಮನ ಮಡಿಲಲ್ಲಿ ಇಳಿದ ದಿನದಿಂದ ಸಂಗೀತದ ಸಾಂಗತ್ಯ... ಅಪ್ಪನ ’ವಂದೇಮಾತರಂ’ಗೆ ತೊದಲುನುಡಿಗಳ ಹಿಮ್ಮೇಳ... ಹನ್ನೆರಡರ ಪುಟ್ಟ ಹೆಜ್ಜೆಗಳಿಂದ ಪ್ರೀತಿಯ ಗುರುಗಳ ಮಾರ್ಗದರ್ಶನ... ತಮ್ಮನ ಮೃದಂಗಕ್ಕೆ ನನ್ನ ಸರಿಗಮ... ಗೆಳೆಯರೊಂದಿಗೆ ಗುದ್ದಾಟಕ್ಕೆ ರಾಗ-ತಾಳಗಳು raw material... ಈ ನಂಟಿಗೆ ಇಲ್ಲಿ ನೀವೀಗ ಈಡು...

ನೀನು ಸಂಗೀತದ್ ಬಗ್ಗೆ ಯಾಕೆ ನಿನ್ನ ಬ್ಲಾಗ್‌ನಲ್ಲಿ ಬರೀಬಾರದು ಅಂತ ಕೇಳಿ, ಕಾಡಿಸಿ-ಪೀಡಿಸಿ ಸುಸ್ತಾದ ಸ್ನೇಹಿತರಿಗೆಲ್ಲ ಮನದಾಳದ ಥಾಂಕ್ಯೂ! ತ್ಯಾಗರಾಜರ ಆರಾಧನೆ ಇವತ್ತು.ಇದಕ್ಕಿಂತ inspiration ಇನ್ನೇನು ಬೇಕು ಅಂತ ಇವತ್ತು ಇಲ್ಲಿ ಗುದ್ದಲಿ ಪೂಜೆ ಮಾಡಿಬಿಟ್ಟಿದೀನಿ. ಈಗ ಅನುಭವಿಸಿ ನಿಮ್ಮ ಕರ್ಮಫಲ!:))