Sunday, February 17, 2008

ಫೆಬ್ರವರಿ 9, 2008ರ ಟಿ ಎಮ್ ಕೃಷ್ಣ ಕಚೇರಿ : ಸಂಪ್ರದಾಯ, creative ಸಾಧ್ಯತೆಗಳು

ಕಳೆದವಾರ ನನ್ನ ನೆಚ್ಚಿನ ಗಾಯಕ ಟಿ ಎಮ್ ಕೃಷ್ಣರವರ ಕಚೇರಿ, ಜಯನಗರದ ಎನ್ ಎಮ್ ಕೆ ಆರ್ ವಿ ಕಾಲೇಜಿನ ಸಭಾಂಗಣದಲ್ಲಿ. ಆಹ್ವಾನಪತ್ರಿಕೆಯಲ್ಲಿ ಕೃಷ್ಣನಾಮ ನೋಡಿದ್ ದಿನದಿಂದ ಒಳಗೊಂದು ಟೈಮರ್ ಹೊಡ್ಕೊಳ್ಲಕ್ಕ್ ಷುರು ಮಾಡಿಬಿಟ್ಟಿತ್ತು!(ಎಂದಿನಂತೆ! :p) ಅದು ಸಾಲದು ಅಂತ ವಯೊಲಿನ್‍ನಲ್ಲಿ ಚಾರುಲತಾ ರಾಮಾನುಜಮ್, ಮೃದಂಗದಲ್ಲಿ ಕುಮಾರ್ ಸರ್(ಅರ್ಜುನ್ ಕುಮಾರ್), ಘಟಕ್ಕೆ ಸುಕನ್ಯಾ ರಾಂಗೋಪಾಲನ್! ಇಷ್ಟೆಲ್ಲ ಫೇವರಿಟ್‍ಗಳು ಒಟ್ಟು ಸೇರಿದಾಗ ಕಚೇರಿಗೆ ಹೋಗದಿದ್ರೆ ಆದೀತೇ?! ನನ್ನ ಅದೃಷ್ಟಕ್ಕೆ ಅವತ್ತೇ ನನ್ನ ಖಾಸಾ ಸಾರಥಿ ಕಂ ತಮ್ಮ ಉಡುಪಿಯಲ್ಲಿ ಕಚೇರಿ ಅಂತ ಹೊರಟುಬಿಟ್ಟಾಗ ಅಯ್ಯೊ ಪೂರ್ತಿ ಕಚೇರಿ ಕೇಳಕ್ಕಾಗಲ್ವಲ್ಲಾ ಅನ್ನೋ ಕಳವಳವೂ ಸೇರಿಕೊಳ್ತು! ವಿಧಿವಿಲಾಸ ಅಂತ ಸಮಾಧಾನ ಹೇಳಿಕೊಳ್ತಾ ಮತ್ತೆ ಕಚೇರಿಯ ಗುಂಗಿನಲ್ಲಿ ಬಿದ್ದೆ...

ಅಂತೂ ಕಚೇರಿಯ ದಿನ ಬಂದೇಬಿಡ್ತು. ಬೆಂಗಳೂರಿನ ಈ ಮೂಲೆಯಿಂದ ಆ ಮೂಲೆಗೆ ಕಿಟಿಪಿಟಿ ಟ್ರಾಫಿಕ್ ದಾಟುತ್ತಾ ದಡಬಡಾಯಿಸಿದಾಗ 5.25. ಕಚೇರಿ ಷುರು ಆಗೋಕೆ ಆಹ್ವಾನಪತ್ರಿಕೆಯ ಪ್ರಕಾರ ಇನ್ನೂ ಐದು ನಿಮಿಷ. ಒಳಗೆ ಕಾಲಿಟ್ಟರೆ ಸಾವಿರ ಚಿಲ್ಲ್ರೆ ಸಾಮರ್ಥ್ಯದ ಸಭಾಂಗಣ ಕಚೇರಿ ಷುರು ಆಗೋಕೆ ಮುಂಚೆಯೇ ಭರ್ತಿ! ತಡಕಾಡುತ್ತಾ ಕುರ್ಚಿಗಳ ಮಧ್ಯ ಮೆಟ್ಟಿಲೊಂದರ ಮೇಲೆ ನನ್ನ ರಾಜ್ಯಸ್ಥಾಪನೆ ಮಾಡಿ ಕೂತೆ. ಚಾರುಲತಾ ಬದಲು ಚೆನ್ನೈನ ಅಮೃತಾ ಮುರಳಿ ವಯೊಲಿನ್‍ನಲ್ಲಿದ್ದರು.

ಅಪರೂಪವಾಗಿ ಕೇಳಿಬರೋ ಮುತ್ತುಸ್ವಾಮಿ ದೀಕ್ಷಿತರ ಕೃತಿ ಶ್ರೀರಂಜನಿ ರಾಗದ ಶ್ರೀದುಂದುರ್ಗೇ ಸೂಪರಾಗಿ ಹಾಡಿದ್ರು, ರಾಗಾಲಾಪನೆ out of the world ಅನ್ನಿಸ್ತು. ಸರಿ, ಸರಿ, ಚಾನೆಲ್ ಬದಲಾಯಿಸ್ಬೇಡಿ, ಇಲ್ಲೀಗ ಕಛೇರಿಯ ವಿಮರ್ಶೆಯನ್ನೋ ಅಥವಾ ವರದಿಯನ್ನೋ ಬರಿಯೋದಿಲ್ಲ!:) ಅವತ್ತು ಕಚೇರಿ ಕೇಳಿ ಹೊರಬಂದಮೇಲೂ ತಲೆಯಲ್ಲಿ/ಕಿವಿಯಲ್ಲಿ ಉಳಿದ ವಿಷಯಗಳಲ್ಲೊಂದು ಇಲ್ಲಿ ಹಂಚಿಕೊಳ್ತೀನಿ.

ಈಗ ಬರೀತಿರೋ ನಾಕು ಸಾಲಿನ ಮಾಹಿತಿ ಕರ್ನಾಟಕ ಸಂಗೀತದ ಪರಿಚಯವಿಲ್ಲದವರಿಗೆ ಮಾತ್ರ : ವಾಗ್ಗೇಯಕಾರರು ರಚಿಸಿಕೊಟ್ಟಿರೋ ಕೃತಿಯ ಚೌಕಟ್ಟಿಗೆ ಪೂರಕವಾಗಿಯೂ ಕಲಾವಿದರ ಸೃಜನಶೀಲತೆಗೆ ಇಂಬು ನೀಡೋಹಾಗೆ ಮನೋಧರ್ಮ ಪ್ರಕಾರಗಳಿರೋದು ಕರ್ನಾಟಕ ಸಂಗೀತದ ವಿಶಿಷ್ಟತೆ. ಇಂಥಾ ಮನೋಧರ್ಮ ಪ್ರಕಾರಗಳಲ್ಲಿ ಒಂದು ನೆರವಲ್. ಕೃತಿಯ ಸಾಹಿತ್ಯದ ಒಂದು ಸಾಲನ್ನು ಆಯ್ದು ರಾಗಕ್ಕನುಗುಣವಾಗಿ ವಿವಿಧ ಸಂಚಾರಗಳನ್ನ ಬಳಸ್ತಾ ವಿಸ್ತರಿಸಿ ಹಾಡೋದೇ ನೆರವಲ್. ಸಾಹಿತ್ಯಾಕ್ಷರದ ಸ್ಥಾನಪಲ್ಲಟ ಮಾಡದೇ ಆ ಚೌಕಟ್ಟಿನಲ್ಲೇ ರಾಗದ ಸಾಧ್ಯತೆಗಳನ್ನ ಹುಡುಕಿ ನಡೆಯೋ ಮೋಜಿನ ಹಾದಿ ನೆರವಲ್‍ದು.

ಅವತ್ತಿನ ಕಚೇರಿಯಲ್ಲಿ ಮೈನ್ ಐಟೆಮ್ ಮಧ್ಯಮಾವತಿಯ ’ಪಾಲಿಂಚು ಕಾಮಾಕ್ಷಿ’(ಶ್ಯಾಮಾಶಾಸ್ತ್ರಿಯವರ ರಚನೆ). ವಿಸ್ತಾರವಾಗಿ ಆಲಾಪನೆ ಮಾಡಿ ಕೃತಿ ಹಾಡಿ ವಾಡಿಕೆಯಂತೆ ಮೊದಲ ಕಾಲ(speed)ದಲ್ಲಿ ನೆರವಲ್ ತೊಗೊಂಡ್ರು. ಅದು ಮುಗೀತಿದ್ದಹಾಗೇ ಪಟ್ ಅಂತ ಮೊದಲಕಾಲದಲ್ಲಿ ಸ್ವರಪ್ರಸ್ತಾರ ಷುರು ಮಾಡಿಬಿಟ್ಟಾಗ ಅಯ್ಯೋ ಇದೇನು ಇವತ್ತಿನ ಭೋರ್ಗರೆಯೋ ಮನೋಧರ್ಮಕ್ಕೆ ಎರಡನೇ ಕಾಲದ ನೆರವಲ್ ಇರಬೇಕಿತ್ತಲ್ಲ ಅನ್ನಿಸ್ತು. ಅಮೃತಾ ಮುರಳಿ ಇವರ ಸ್ವರಪ್ರಸ್ತಾರಕ್ಕೆ ಪೂರಕವಾಗಿ ಸ್ವರಹಾಕಿ ಬಿಟ್ಟಾಗ ಮತ್ತೊಂದು ಶಾಕ್! ಎರಡನೇ ಕಾಲದ ನೆರವಲ್ ಹಾಡಿಬಿಡೋದೇ! ಅದಕ್ಕೆ ಮತ್ತೆ ಅಮೃತಾ ಉತ್ತರ. ಮತ್ತೆ ಒಂದನೇ ಕಾಲದ ಸ್ವರಪ್ರಸ್ತಾರ, ಮತ್ತೆ ಎರಡನೇ ಕಾಲದ ನೆರವಲ್ ಹೀಗೆ ವೇಗದ - ನಿಧಾನಗತಿಯ ಸಾಹಿತ್ಯ- ಸ್ವರ ವಿಸ್ತರಣೆಗಳು ಒಂದರ ಪಕ್ಕಒಂದು ಸಾಲಾಗಿ ಬರುತ್ತಾ ಹೊಸ ಅನುಭವ-ಸಾಧ್ಯತೆಗಳನ್ನ ತೆರೆದಿಟ್ಟವು. ಅರ್ಜುನ್‍ಕುಮಾರ್-ಸುಕನ್ಯಾ ಹುರುಪಿನ ತನಿ ಆವರ್ತನ ಕೇಳಿ ಹೊರಬಂದಾಗ ನೆರವಲ್ ಹಾಡಿಕೆಯ ವಾಡಿಕೆ, ಅದರಲ್ಲಿ ಇರುವ ಸಾಧ್ಯತೆಗಳು, ಸಂಪ್ರದಾಯ, ಅದರಲ್ಲಿರುವ collective intelligence, ಅದರೊಳಗೇ ಅಡಗಿರುವ ಹತ್ತುಹಲವು ಹೊಸ ಸೃಜನಾತ್ಮಕ ಹಾದಿಗಳು, ಪ್ರತೀ ಕಚೇರಿಯಲ್ಲೂ reaffirm ಆಗುತ್ತಾ ಹೋಗುವ ಕೃಷ್ಣಭಕ್ತಿಯ ಕಾರಣಗಳಾಗಿ ಹೊಳೆದವು!