Wednesday, March 5, 2008

ಜೂಠೇ ನೈನಾ ಬೋಲೇ..., ಪಂ. ಸತ್ಯಶೀಲ್ ದೇಶಪಾಂಡೆ, ವರಾಳಿ

ಹಿಂದೆ ಯಾವಾಗ್ಲೋ ದೀಪ್ತಿಯ ಹಳೆಯ ಬ್ಲಾಗ್‌ನಲ್ಲಿ ಆಡಿಯೋ ಲಿಂಕ್ ನೋಡಿ ಆಹ್ ಈ ಹುಡುಗಿಯ ದನಿ ಕೇಳೋ ಭಾಗ್ಯ ಸಿಕ್ತಲ್ಲಾ ಅಂತ ಕ್ಲಿಕ್ ಮಾಡಿದಾಗ ’ಲೇಕಿನ್’(೧೯೯೧) ಚಿತ್ರದ "ಜೂಠೇ ನೈನಾ ಬೋಲೆ..." ತೇಲಿತ್ತು, ಆಶಾ ಭೋಂಸ್ಲೆಯವರ ದನಿಯಲ್ಲಿ. ನಂ ಹುಡುಗಿಯ ದನಿ ಕೇಳಲಾಗ್ಲಿಲ್ಲ ಅನ್ನೋ ನಿರಾಸೆಯನ್ನೂ ಮೀರಿ ಕೊಚ್ಚಿಕೊಂಡು ಹೋಗಿತ್ತು ಆ ಹಾಡು! ಸ್ಕೂಲ್ ದಿನಗಳಲ್ಲಿ ವಿವಿಧಭಾರತಿ ಕೇಳ್ತಾ ಯಾವಾಗ್ಲೋ ಆಹ್ ಅನ್ನಿಸಿದ್ದ್ ಹಾಡು. ಆಗ ಯಾವ ಫಿಲ್ಮ್‌ದು ಅಂತ ತಿಳಿದುಕೊಂಡು ಮತ್ತೆ ಹುಡೂಕೋ ಅಷ್ಟು ತಲೆ ಓಡಿಸ್ತಿರಲಿಲ್ಲವಾದ್ದರಿಂದ ಕಳೆದುಹೋಗಿದ್ದ ಹಾಡು. ಸರಿ ದೀಪ್ತಿಯಿಂದ ಸಿಕ್ಕಿರೋ musical giftಗಳಿಗೆ ಇನ್ನೊಂದು ಸೇರ್ಕೊಳ್ತು!

ಸರಿ, ಅದನ್ನ ಮತ್ತೆ ಮತ್ತೆ ಕೇಳೋಕೆ http://www.musicindiaonline.comನಲ್ಲಿ/ ಹುಡುಕಿದ್ದಾಯ್ತು. ಹಾಡಿನ ಪ್ರಾರಂಭಕ್ಕೆ, ಹಾಗೂ ಮಧ್ಯದಲ್ಲಿ ಬರೋ male voice ಪಂ. ಕುಮಾರ್ ಗಂಧರ್ವರ ಶಿಷ್ಯರೂ, ಪ್ರಸಿದ್ಧ ಸಂಗೀತಜ್ಞ ವಾಮನ್ ರಾವ್ ದೇಶಪಾಂಡೆಯವರ ಮಗನೂ ಆದ ಪಂಡಿತ್ ಸತ್ಯಶೀಲ್ ದೇಶಪಾಂಡೆಯವರದ್ದು ಅಂತ ಗೊತ್ತಾಯ್ತು. ಸಂಗೀತಪ್ರಿಯರಾದ ನನ್ನ ಬಾಸ್ - ಅನ್‌ಮೋಲ್, ನಾ ಕೆಲಸಕ್ಕೆ ಸೇರಿದ ಕೆಲದಿನಗಳಲ್ಲೇ ಇದನ್ನ ಕೇಳಿನೋಡು ಅಂತ ಪಂಡಿತ್‌ಜೀಯ ’ಕಹೇಂ’ ಸಿ ಡಿ ಕೈಗಿಟ್ಟಿದ್ದರು. ಅವರ ಮನೆಯಲ್ಲೇ ಸತ್ಯಶೀಲ್‌ರ ಸಂಗೀತ ಮೊದಲಬಾರಿಗೆ ಕೇಳೋ ಅವಕಾಶ ಸಿಕ್ಕಿದ್ದು.

ಇದು ೨-೩ ವರ್ಷದ ಹಿಂದಿನ ಮಾತು. ಇತ್ತೀಚೆಗೆ ಬಿಲಾಸ್‌ಖಾನಿ ತೋಡಿ ಹುಚ್ಚು ಹತ್ತಿಸಿಕೊಂಡು ತಿರುಗುತ್ತಿದ್ದಾಗ ಮತ್ತೆ ಈ ಹಾಡಿಗೆ revisit... ಹಿಂದೂಸ್ತಾನಿ ಸಂಗೀತ ಕಲಿತು, ಕೇಳಿ ಸಾಕಷ್ಟು ಅನುಭವವಿದ್ದ ಅನ್‌ಮೋಲ್‌ರ ಹತ್ತಿರ ಬಿಲಾಸ್‌ಖಾನಿಯ ಬಗ್ಗೆ ಮಾತಾಡ್ತಾ ಸತ್ಯಶೀಲ್ ಹಾಡಿದ್ದ ಈ ಹಾಡು ಅದೇ ರಾಗದ್ದಲ್ಲವಾ ಅಂತ confirm ಮಾಡಿಕೊಂಡಿದ್ದೆ. ಇದಾಗಿ ೨-೩ ತಿಂಗಳಾಗಿರಬಹುದು. ಅನ್‌ಮೋಲ್‌ರಿಂದ ಸತ್ಯಶೀಲ್‌ರ ಕಚೇರಿಗೆ ಆಹ್ವಾನ ಬಂತು. ಬೆಂಗಳೂರಿನ ಸ್ಮೃತಿನಂದನ್ ಸಭಾಂಗಣದಲ್ಲಿ ಮೊನ್ನೆ ಭಾನುವಾರ ಕಾರ್ಯಕ್ರಮ. ಮಧುವಂತಿ, ಯಮನ್ ಕಲ್ಯಾಣ್, ಕಾಮೋದ್, ಅಪರೂಪದ ರಾಗ ನಂದ್...ರಾಗಸುಧೆ ಹರಿದಿತ್ತು. ಕಚೇರಿಯ ನಂತರ ಪಂಡಿತ್‌ಜೀಯವರ ಜೊತೆ ಕೆಲವು ಸಮಯ ಕಳೆಯೋ ಅವಕಾಶ. ಗೆಳೆಯರೊಬ್ಬರ ಮನೆಯಲ್ಲಿ ಊಟ. ಅಲ್ಲಿ ಹೋಗುತ್ತಲೇ ಸತ್ಯಶೀಲ್ ಮತ್ತೆ ಸಂಗೀತದ ಮೂಡ್‌ಗೆ ಇಳಿದರು. ಅಂದು ಹಾಡಿದ್ದ ರಾಗಗಳನ್ನ ಮೆಲುಕು ಹಾಕ್ತಾ, ಬೇರೆ ಬೇರೆ ಸಂಗೀತಗಾರರ approachಗಳನ್ನ ವಿವರಿಸ್ತಾ, ಹಾಡ್ತಾ... ಗಂಧರ್ವಲೋಕ ತೆರೆದಿತ್ತು.

೩ ತಿಂಗಳ ಹಿಂದಿನ ಮಾತು ನೆನಪಿಸಿಕೊಂಡ ಅನ್‌ಮೋಲ್, ಸತ್ಯಶೀಲ್‌ರಿಗೆ ನನ್ನ ’ಜೂಠೆ ನೈನಾ ಬೋಲೆ’ ಪ್ರೀತಿಯ ಬಗ್ಗೆ ಹೇಳಿ, she wants to listen to your bilaskhani todi ಅಂದುಬಿಟ್ಟರು! ಮಗುವಿನಂತಹ ಮುಗ್ಧತೆಯ ಪಂಡಿತ್‌ಜೀ ತಕ್ಷಣ ಆ ಹಾಡಿನ ಪ್ರಾರಂಭದ ’ನೀಕೇ ಘೂಂ...’ ಷುರುಮಾಡಿಯೇ ಬಿಟ್ಟರು! ನನಗೆ ಸ್ವರ್ಗಕ್ಕೆ ಮೂರೇ ಗೇಣು!! ಆ ಖುಷಿಯಲ್ಲಿದ್ದಾಗಲೇ ’ಗಾವೋ’ ಅಂತ ನನಗೂ, ಅಲ್ಲೇ ಇದ್ದ ಅವರ ಮಗ ಸೃಜನ್‍‍ಗೂ ಒಂದೊಂದೇ ಸಾಲು ಹೇಳಿಕೊಡೋಕೆ ಷುರು ಮಾಡಿದ್ರು! ಸ್ವರ್ಗ ಕೈಯ್ಯಲ್ಲಿತ್ತು! ಇದಕ್ಕಿಂತ ಇನ್ನೇನು ಕೇಳಲಿ ಅಂದುಕೊಂಡೆ.

ಆದ್ರೆ ಅವತ್ತು ಪಂಡಿತ್‌ಜೀ ನನ್ನ ಸಂತಸದ ಮೇರೆಗಳನ್ನ ದಾಟಿಸ್ತೀನಿ ಅಂತ ನಿರ್ಧರಿಸಿಬಿಟ್ಟಿದ್ದರು! ಬಿಲಾಸ್‌ಖಾನಿ ತೋಡಿ ಮುಗೀತಿದ್ದ ಹಾಗೇ ’ಅಬ್ ಕುಛ್ ಕರ್ನಾಟಕೀ ಸುನಾವೋ’ ಅಂದ್ರು. ನಾನು ಪೆದ್ದುಪೆದ್ದಾಗಿ ’ಯಮನ್ ಕಲ್ಯಾಣಿ’? ಅಂದೆ. ಬೇಡ ’ಒರಿಜಿನಲ್ ಕರ್ನಾಟಕೀ’ ಹಾಡು ಅಂದ್ರು. ’ಶುಭಪಂತುವರಾಳಿ’ ಅಂದೆ. ಸರಿ ಅಂತಿದ್ದ ಹಾಗೇ ’ಅದು ನಿಮ್ಮ ಮಿಯಾ ಕಿ ತೋಡಿಗೆ ಸಿಮಿಲರ್ ಅನ್ಸುತ್ತೆ' ಅಂದೆ. 'ತುಮ್ ಲೋಗ್ ಸಿಮಿಲರ್ ಕ್ಯೂ ಗಾತೇ ಹೋ, sing some proper carnatic raag' ಅನ್ನುತ್ತಾ ನಮ್ಮ ತ್ಯಾಗರಾಜರ ಘನಪಂಚರತ್ನಗಳಲ್ಲಿ ನನ್ನ ಫೇವರಿಟ್ ಆದ ’ಕನಕನ ರುಚಿರಾ...’ ಹಾಡೋಕೆ ಪ್ರಾರಂಭಿಸಿಬಿಟ್ಟರು!! ಒಂದು ಕ್ಷಣ ದಿಗ್ಭ್ರಮೆಯಲ್ಲಿ ಕಳೆದುಹೋದೆ! ಸಾವರಿಸಿಕೊಳ್ತಾ ಸರಿ, ಆ ರಾಗದಲ್ಲೇ ಏನಾದ್ರು ಹಾಡ್ತೀನಿ ಹಾಗಾದ್ರೆ ಅಂದೆ. ಖುಷಿಯಿಂದ ಹೂ ಅಂದ್ರು. ಮುತ್ತುಸ್ವಾಮಿ ದೀಕ್ಷಿತರ ’ಮಾಮವ ಮೀನಾಕ್ಷೀ’ ಹಾಡುತ್ತಿದ್ದಂತೆ ಷಡ್ಜದಿಂದ ಪಂಚಮಕ್ಕೆ ಬರುವ ಜಲಪಾತದಂಥಾ ಬ್ರಿಗಾ ಸಂಚಾರ, ಗಾಂಧಾರದ ಸೂಕ್ಷ್ಮವಾದ ಕಂಪಿತಗಳನ್ನ ಆಸ್ವಾದಿಸ್ತಾ, ಮಗನಿಗೆ ಇದನ್ನ ಗಮನಿಸು, ಅದನ್ನ ಗಮನಿಸು ಅಂತ ಹೇಳ್ತಾ ಕೂತ ಪಂಡಿತ್‌ಜೀ ದೊಡ್ಡವರ ದೊಡ್ಡತನದ ಪ್ರತೀಕವಾಗಿದ್ದರು.

ಹಾಡಿ ಮುಗಿಸಿದಾಗಲೂ ನಮ್ಮ ಪಂಚರತ್ನಕೃತಿಯಬಗ್ಗೆ ಇನ್ನೊಂದು ಪದ್ಧತಿಯ ಅಷ್ಟು ಹಿರಿಯಕಲಾವಿದರ ಪ್ರೀತಿ ಅಚ್ಚರಿಯಲ್ಲಿ ಮುಳುಗಿಸಿತ್ತು! ಜೊತೆಗೇ ನಮ್ಮ ಕೃತಿಗಳ ಅದ್ಭುತ ಭಂಡಾರದ ಬಗ್ಗೆ ಹೆಮ್ಮೆಯೆನಿಸಿತ್ತು!!

compositionಗಳಿಗೆ ಅಷ್ಟು ಪ್ರಾಮುಖ್ಯ ನೀಡದ ಹಿಂದೂಸ್ತಾನಿ ಪದ್ಧತಿಯಲ್ಲಿ oral traditionನ ಮೇಲೇ ಅವಲಂಬಿತವಾಗಿ ಅಲ್ಲಲ್ಲಿ ಉಳಿಯುತ್ತಾ ಅಲ್ಲಲ್ಲಿ ನಶಿಸುತ್ತಾ ಹೋಗುತ್ತಿರುವ compositionಗಳನ್ನ ಹುಡುಕಿ, ಹಿರಿಯ ಸಂಗೀತಗಾರರಿಂದ ಹಾಡಿಸಿ, notation ಸಿಕ್ಕಲ್ಲಿ ಅದನ್ನು ಕಾಯ್ದಿಡುವ ದೊಡ್ಡ ಸಂಶೋಧನೆ-ಸಂಗ್ರಹಗಳ ಕೆಲಸವನ್ನ ಸತ್ಯಶೀಲ್‌ರು ಮುಂಬೈನಲ್ಲಿರುವ ತಮ್ಮ ’ಸಂವಾದ್ ಫೌಂಡೇಷನ್’ನ ಮೂಲಕ ಮಾಡ್ತಿದಾರೆ (ಕೃತಿಗಳ ಬಗ್ಗೆ ಅವರ ಆಸಕ್ತಿಯ ಮೂಲ ಇದೇ ಇರಬಹುದು!). ಇಲ್ಲಿ ಸುಮಾರು ೮೦೦೦ಗಘಂಟೆಗಳಷ್ಟು ಧ್ವನಿಮುದ್ರಿಕೆಗಳೂ, ೩೦೦೦ದಷ್ಟು manuscript notationಗಳೂ ಇವೆಯಂತೆ. ಮಾಹಿತಿಗಾಗಿ http://www.satyasheel.com/ ನೋಡಿ.

ಅಂದಹಾಗೆ ಲೇಕಿನ್‌ನ ಹಾಡನ್ನ ’ಝೂಟೇ ನೈನಾ’ ಅಂದುಕೊಂಡಿದ್ದೆ, ಅದು ’ಜೂಠೇ ನೈನಾ’(ಜೂಠಾ=ಎಂಜಲು) , ಹೊರಗೆಲ್ಲೋ ಅಲೆದು ಬಂದು ಕತ್ತಲ ರಾತ್ರಿಯ ಚಂದ್ರನಂತೆ ಮಿಂಚುತ್ತಿರೋ ಮಳ್ಳ ಕಣ್ಣುಗಳು ಅಂತ ಪಂಡಿತ್‌ಜೀ ವಿವರಿಸಿದ್ರು!:)

[P.S.,: ಲೇಕಿನ್‌ನ ಹಾಡಿಗೆ ಹಾಗೂ ’ಕನಕನರುಚಿರಾ’ಗೆ musicindiaonlineನ ಲಿಂಕ್‌ಗಳನ್ನ ಕೊಟ್ಟಿದ್ದೀನಿ, ಹಾಡಿನ ಮೇಲೆ ಕ್ಲಿಕ್ ಮಾಡಿ ಕೇಳಬಹುದು. ಇಂದಿನ ಪ್ರಮುಖ ಸಂಗೀತಗಾರರ ಸಾಲಿನಲ್ಲಿರೋ ಸಂಜಯ್ ಸುಬ್ರಮಣ್ಯಂ ಹಾಗೂ ಉನ್ನಿಕೃಷ್ಣನ್ ಒಟ್ಟಿಗೆ ಹಾಡಿರುವ ’ಕನಕನ ರುಚಿರಾ’ ತುಂಬಾ ಚೆನ್ನಾಗಿದೆ. ಅದನ್ನ ಹುಡುಕ್ತಿದ್ದೆ, ಸಿಗಲಿಲ್ಲ. ಅದರ ಬದಲು ನಮ್ಮ ಭೀಷ್ಮ ಪಿತಾಮಹ ಶೆಮ್ಮಂಗುಡಿಯವರ ಹಾಡಿಕೆಯಲ್ಲಿ ಕೇಳಿಸ್ತಿದ್ದೀನಿ. ಮೇಲೆ ಹೇಳಿರೋ ಡ್ಯೂಯೆಟ್ ಸಿಕ್ಕರೆ ಕೇಳಿ]

17 comments:

L'Etranger said...

ನಿಮ್ಮ ಭಾಗ್ಯದ ಬಗ್ಗೆ ಏನು ಹೇಳಲಿ! ಒಳ್ಳೊಳ್ಳೆ ಸಂಗೀತಗಾರರೊಂದಿಗೆ ಕುಳಿತು, ಹಾಡಿ, ಕಲಿತು, ಆನಂದಿಸಿ, ಬೆಳೆಯುವ ಅವಕಾಶ ಮತ್ತು ಆಸ್ಥೆ ಎಲ್ಲರಿಗೂ ಇರಲ್ಲ! ಇಂಥ ಒಳ್ಳೆಯ ಅನುಭವವನ್ನು ಇಲ್ಲಿ ಹಂಚಿಕೊಂಡು ನಮಗೂ ಆ ಅನಂದದ ತುಣುಕೊಂದನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.

ಈ ರೀತಿಯ ಅನುಭವಗಳ excitement ಅನ್ನು ಬರೆಯಲು ಹೋಗಿ ಲಂಗು-ಲಗಾಮಿಲ್ಲದೆ ರಂಪ ಎಬ್ಬಿಸುವವರೇ ಹೆಚ್ಚು. ಆದರೆ ನೀವು ಇಷ್ಟು ಸರಳವಾಗಿ ಬರೆದು ಕೂಡಾ ನಿಮಗಾಗಿರುವ excitement ಅನ್ನು ನಮಗೆ ಚನ್ನಾಗಿ communicate ಮಾಡಿರುವುದು ಬರಹದಲ್ಲಿ ನಿಮಗಿರುವ maturity ಯನ್ನು ತೋರಿಸುತ್ತಿದೆ! :)

By the way, ನೀವು ಕೂಟ್ಟಿರುವ ಕೆಲವು ಲಿಂಕ್ಸ್ ದಾರಿ ತಪ್ಪಿಸುತ್ತಿವೆ. ಸ್ವಲ್ಪ ನೋಡ್ತೀರಾ?

Sumana said...

Tumba Chennagide :) Idanna odi Panditji avara kacheri matte keLidashtu khushi aaytu ! Keep writing :)

Srikanth said...

L'Etranger ಅವರು ಹೇಳಿರುವುದು ೧೦೦% ನಿಜ.ಘನವಿದ್ವಾಂಸರ ಬಳಿ ಹೀಗೆ ಕುಳಿತು, ಹಾಡಿ, ಕಲಿತು, ಆನಂದಿಸಿ, ಬೆಳೆಯುವ ಅವಕಾಶ ಮತ್ತು ಆಸ್ಥೆ ಯಾವುದೂ ಯೋಗವೇ ಸರಿ.ಇಂತಹ ಸಂದರ್ಭಗಳು ಸ್ವಪ್ರಯತ್ನ ಮಾತ್ರದಿಂದಲೇ ಬರುವುದಿಲ್ಲ.ಕಾಲ ಕೂಡಿ ಬರಬೇಕು.
ಬ್ಲಾಗ್ ಪೋಸ್ಟ್ ಓದಿ ಸಂತೋಷ ಆಯಿತು.

ಮಧು said...

ಶ್ರೀಯವರೇ,
ಒಂದು ಒಳ್ಳೆಯ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ನಿಮ್ಮದು ಸೌಭಾಗ್ಯವೇ ಸರಿ.
ಬಿಲಾಸ್ ಖಾನಿ ತೋಡಿ ಅಂದ್ರೆ ನನ್ನ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಎಂಥಾ ರಾಗ! ಕರುಣಾರಸ ಉಕ್ಕಿ ಹರಿಯುತ್ತದೆ.
ಸಾಧ್ಯವಾದರೆ ಒಮ್ಮೆ ಉಸ್ತಾದ್ ರಶೀದ್ ಖಾನ್‌ರ ಬಿಲಾಸ್ ಖಾನಿ ತೋಡಿ ಕೇಳಿ.
ಮತ್ತೊಮ್ಮೆ ಅನಂತ ಧನ್ಯವಾದಗಳು
ಮಧು

ಪೂರ್ಣ ವಿ-ರಾಮ said...

ಸಖತ್ತಾಗಿದೆ.

ಬರಹದಲ್ಲಿ ತುಂಬಾ ಸರಳತೆ ಇದೆ. ಅದನ್ನೇ ರೂಢಿಸಿಕೊಳ್ಳಿ.
ಏಕೆಂದರೆ ಅದು ಮಾತ್ರ ಸರ್ವಕಾಲಿಕ.


ಧನ್ಯವಾದ

Sree said...

@l'etranger,
ಥ್ಯಾಂಕ್ಸು:) ಲಿಂಕ್ಸ್ ಸರಿ ಮಾಡಿದ್ದೀನಿ, ಈಗ ಪ್ರಯತ್ನಿಸಿ

@ಸುಮ್
ಥ್ಯಾಂಕ್ಸ್ ಮಗ:)

@ಶ್ರೀಕಾಂತ್
ಹೌದು, ಕಾಲಕೂಡಿ ಬರಬೇಕು,i consider myself lucky!:)

@ಮಧು& ಪೂರ್ಣ ವಿ-ರಾಮ
ನನ್ನ ಹಾಡು ಕೇಳೊಕೆ ಬಂದಿದ್ದಕ್ಕೆ ಧನ್ಯವಾದಗಳು!:)
ಮಧು, ಹೌದು ಅದೊಂದು ಅದ್ಭುತ ರಾಗ! ರಶೀದ್ ಖಾನ್‌ರದ್ದೂ ಕೇಳಿದ್ದೀನಿ:)

SimblyDimply said...

Ahaaaaaaaaa!!!!! Ninna post odutiddaga ninage yenen ansirbodu anta nanna imagination went rioting! Truly once in a lifetime events ivella! Nanage thumba manassanna muTTiddu - kritigaLa microscopic nuances and graces gaLanna avara maganige torisikoDuva salugLlu. Karnataka Shastreeya Sangeetavanna is 'the music of the southern people who beat their thighs hard while they sing ' anno common bias na meeri, adanna anandiso manobhava kelave open-minded musicains du. Satyasheel is one such sensitive musician who probably sees open expanses of musical thought. Wish I was there too!

Hinge ninage wonderful musical experiences agli anta haraysing raaNi!

Keshav Kulkarni said...

ಶ್ರೀ,

ಹಿಂದುಸ್ತಾನೀ ಮತ್ತು ಕರ್ನಾಟಕ ಸಂಗೀತದ ಬಗ್ಗೆ ತುಂಬ ದಿನಗಳಾದ ಮೇಲೆ ಓದಲು ಸಿಕ್ಕಿತು.ನೀವು ಧನ್ಯ. ನೀವೇಕೆ ನಿಮ್ಮದೊಂದು ಪಾಡ್-ಕಾಸ್ಟ್ ಮಾಡಬಾರದು?

ಕೇಶವ (www.kannada-nudi.blogspot.com)

ಅಮರ said...

ಸಂಗೀತದ ಬಗ್ಗೆ ಸಿಕ್ಕಾಪಟ್ಟೆ ಬರೆದಿದ್ದಿರಾ ಅನ್ನಿಸಿತು, ನಿಜ ನನಗೆ ರಾಗಗಳ ತಾಳಗಳ ಬಗೆಗೆ ಹೆಚ್ಚಿನ ಅರಿವಿಲ್ಲ. ಇಚೆಗೆ ಹಿಂದೂಸ್ಥಾನಿ ಕೇಳೊದಕ್ಕೆ ಶುರುಮಾಡಿ ಕೆಲವು ರಾಗಗಳ ಗುರುತಿಸಬಲ್ಲೆ. ಒಂದಷ್ಟು ಕಲೆಷ್ಕನ್ ಇದೆ ಹಿಂದೂಸ್ಥಾನಿ,ಕರ್ನಾಟಿಕ್ ಮತ್ತೆ ವೆಸ್ಟನ್ ಕ್ಲಾಸಿಕಲ್..... ಹೀಗೆ

ಭಾವಗೀತೆಗಳು.... ಗಜಲ್ .... ಮೂಡ್ ಇದ್ದಹಾಗೆ ಕೇಳೊದು ...... :)

ಸಂಗೀತ ಮನಸ್ಸಿಗೆ ಮುದ ನಿಡುತ್ತೆ ..... ಮತ್ತೆನು ಬೇಕು

Sree said...

ದೀಪವ್ವಾ, ನೀ ಹೇಳಿದ್ದ್ ಸರಿ, ಆ ಸೆನ್ಸಿಟಿವ್‌ನೆಸ್ ಇದ್ದರೆ ಸಂಗೀತಗಾರರು prejudiceಗಳನ್ನ ದಾಟಿ ಸಂಗೀತದ ಒಟ್ಟು ಅನುಭವವನ್ನ ಕಂಡುಕೊಳ್ಳೋಕೆ ಸಾಧ್ಯ ಅನ್ನಿಸುತ್ತೆ...ನಿನ್ನ ಹಾರೈಕೆಗೆ ಥ್ಯಾಂಕ್ಸು!:)

ಕೇಶವಕುಲಕರ್ಣಿಯವರೇ ಬಂದು ಓದಿದ್ದಕ್ಕೆ, ಕಮೆಂಟಿಸಿದ್ದಕ್ಕೆ ಧನ್ಯವಾದಗಳು! ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ, ವಿಷಯ ವೈವಿಧ್ಯ, ಹೇಳೋ ರೀತಿ - ಎಲ್ಲ ಸೂಪರ್! ಪಾಡ್-ಕಾಸ್ಟ್...ಹ್ಮ್ಮ್ಮ್ ಮಾಡಬೇಕು...

ಅಮರ,
ಅಂದ್ರೆ ಹೆಚ್ಚು ಟೆಕ್ನಿಕಲ್ ಅನ್ನಿಸ್ತಾ? ಸ್ವಲ್ಪ ವಿವರವಾಗಿ ಹೇಳ್ತೀರಾ? ಯಾಕಂದ್ರೆ ಇದು ಹೀಗೇ ಸಂಗೀತದ ಬಗ್ಗೆ ಅಷ್ಟು ಟೆಕ್ನಿಕಲ್ ಆಗಿ ತಿಳಿಯದಿದ್ರೂ ಕೇಳುವ ಅಭಿರುಚಿ ಇರೋವ್ರಿಗೆ, ಅಥ್ವಾ ಹೊಸದಾಗಿ ಕೇಳಹೊರಟವ್ರಿಗಾಗಿ ಕನ್ನಡದಲ್ಲಿ ಬರಿಯೋಕೆ ನಾನು ಮಾಡ್ತಿರೋ ಪ್ರಯತ್ನ. ತೀರಾ ಮೇಲೆ ಮೇಲೆ ಈ ಹಾಡು ಚೆನ್ನಾಗಿದೆ- ಆ ಹಾಡು ಚೆನ್ನಾಗಿದೆ ಅನ್ನೋದರಿಂದ ಸ್ವಲ್ಪ ಆಳಕ್ಕೆಳೆದೂ, ಉಸಿರು ಕಟ್ಟಿಸದಂತೆ ಬರೀಬೇಕು ಅಂತ ಹೊರಟಿದ್ದು. ಮುದನೀಡುವ ಸಂಗೀತದಲ್ಲಿ ಇರುವ nuanceಗಳ, ಆ ಮುದದ ಹಿಂದಿರುವ ಪರಂಪರೆ-ಪ್ರಯತ್ನ-ಪ್ರಶ್ನೆಗಳ ಪುಟ್ಟ ಪರಿಚಯಗಳಾಗಬೇಕು - ಹೀಗೆಲ್ಲಾ ಏನೇನೋ ಅಂದುಕೊಂಡು ಷುರು ಮಾಡಿದ್ದೀನಿ. ಉತ್ಸಾಹದ ಭರದಲ್ಲಿ ಅತಿಯಾಗಿ ಮಾಹಿತಿ ತುಂಬಿ put off ಮಾಡಿಸುವ ಅಪಾಯ ಇರುತ್ತೆ...feedback ಇದ್ದರೆ ಎಲ್ಲಿ ಗೆರೆ ಎಳೀಬೇಕು ನನಗೂ ಸ್ವಲ್ಪ ಐಡಿಯಾ ಬರುತ್ತೇನೋ ಅಂತ:)

ಹಂಸಾನಂದಿ Hamsanandi said...

ಚೆನ್ನಾಗಿದೆ - ಸತ್ಯಶೀಲ್ ದೇಶ್ಪಾಂಡೆಯವರ್ ಹೆಸರು ತಿಳಿದಿರಲಿಲ್ಲ.

ಜೂಠೇ ನೈನಾ ಬೋಲೆ - ನನಗೂ ಅತಿ ಪ್ರೀತಿಯ ಹಾಡು.

’ಕರ್ನಾಟಕಿ’ ಹಾಡು ಅಂದಾಗ - ತಕ್ಕದಾಗಿ ಸುರಟಿ - ಕೇದಾರಗೌಳ, ಬೇಗಡೆ, ಶಂಕರಾಭರಣ ಕ್ಕೆ ಹೋಗದೇ ನೀವ್ಯಾಕ್ರೀ ಯಮನ್, ಶುಭಪಂತುವರಾಳಿ ಅಂತಿದ್ರಿ ;) :) ? ಆದ್ರೆ, ಕೊನೆಗೆ ವರಾಳಿ ತೊಗೊಂಡಿದ್ದು ಒಳ್ಳೇ ಮಾತು.

Sree said...

@ಹಂಸಾನಂದಿ
ಸಂಗೀತದ ಬಗ್ಗೆ ಬರಿಯೋವ್ರು ಬಂದಿದ್ದು ಖುಷಿ!:)
ಹೌದು, ಅಷ್ಟಾಗಿ ಲೈಮ್ ಲೈಟ್‍ಗೆ ಸಿಕ್ಕದ ಕಲಾವಿದ ಅವ್ರು...
ಇನ್ನು ಯಮನ್, ಶುಭಪಂತುವರಾಳಿ...ಅವ್ರು ತುಂಬಾ ಸೀನಿಯರ್ರು ಸಾರ್, ನಾನೆಲ್ಲೋ ಎಳೇ ಹುಲ್ಲುಕಡ್ಡಿ, ಸ್ವಲ್ಪ ತಬ್ಬಿಬ್ಬಾಗೋದು ಸಹಜ...ಪೆದ್ದು ಪೆದ್ದಾಗಿ ಪ್ಲೀಜ್ ಮಾಡೋಕೆ ಸಿಮಿಲ್ಯಾರಿಟಿ ಹಿಡಿಯ ಹೊರೆಟೆ ಅನ್ನ್ಸುತ್ತೆ!:)) ಅದು ಮೂರ್ಖತನ ಅಂತ ಈಗ ಅನ್ನಿಸೋ ಅಷ್ಟು ಆಗ ಆ ಗಲಿಬಿಲಿಯಲ್ಲಿ ಗೊತ್ತಾಗ್ಲಿಲ್ಲ:)

dinesh said...

ಬರಹ ತುಂಬಾ ಚೆನ್ನಾಗಿದೆ. ಸೃಜನಶೀಲತೆಯ ಎಲ್ಲ ರಂಗಗಳಲ್ಲೂ ಕೈಯಾಡಿಸುತ್ತಿರುವ ನಿಮ್ಮ ಬರಹಗಳನ್ನ ೋದೋದಕ್ಕೆ ಖುಷಿಯಾಗ್ತಿದೆ.

Sree said...

jack of all trade ಥರಾ ದಿನೇಶ್:)) ನೀವು ಓದಿ ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್, ಬರ್ತಾ ಇರಿ, ಬರಿಯೋ ಪ್ರಯತ್ನ ಮಾಡ್ತಾ ಇರ್ತೀನಿ:)

Sanjeev K Kulkarni said...

ಒಳ್ಳೆಯ ಲೇಖನಗಳನ್ನು ಬರದೀರಿ. ಈ ಬಿಲಾಸಖಾನಿ ತೋಡಿ ಬಗ್ಗೆ ಅನೇಕ ಕಥೆಗಳು ಅವ. ಈ ತೋಡಿ ಮನ್ಸೂರರು, ರಾಜಗುರು, ಉ. ಬಡೆ ಗುಲಾಂ ಅಲಿ ಖಾನ, ಭೀಮಸೇನ್ ಜೋಶಿ ಅವ್ರು ಹಾಡಿದ್ದು ಎಲ್ಲರ ಸಿಕ್ರ ಕೇಳ್ರಿ. ಹಿಂದುಸ್ತಾನಿ ಸಂಗೀತದಲ್ಲಿ ಬೇರೆ ಬೇರೆ ಘರಾಣಾದಲ್ಲಿ ಒಂದೇ ಬೇರೆ ಬೇರೆ ಚೀಜಗಳನ್ನು ಹಾಡ್ತಾರ. ಧಾರವಾಡದ ಪಂ. ಕೈವಲ್ಯ ಕುಮಾರ ಗುರವ ಅವ್ರ ಹತ್ರ ಸಾವಿರದ ಮೇಲೆ ಚೀಜಗಳ ಸಂಗ್ರಹ ಅದ, ಅವೂ ಎಲ್ಲ ಕೈ ಬರಹದಲ್ಲಿ ಅವ, ಎಲ್ಲಾ ಅವರ ತಂದೆಯವರಾದ ಪಂ. ಸಂಗಮೇಶ್ವರರು ಸ್ವತಃ ಬರೆದಿದ್ದು.

ನಿಮ್ಮ ಬ್ಲಾಗಿನ ಹೆಸರು ನೋಡಿ ಶ್ರೀ ರಾಗದ ಬಗ್ಗೆ ಏನರ ಬರದಿರೋ ಅಂತ ಹುಡುಕ್ತಿದ್ದೆ. ಹಿಂದುಸ್ಥಾನಿಯ ಶ್ರೀ ಯನ್ನು ಕೇಳಿ ನೋಡ್ರಿ. ವಿಶೇಷವಾಗಿ ಪಂ. ಪನ್ನಾಲಾಲ್ ಘೋಷ್ ಅವ್ರ ಕೊಳಲಿನಲ್ಲಿ.

ಹಿಂಗ ಸಂಗೀತದ ಬಗ್ಗೆ ಬರಕೋತಿರ್ರಿ.
-ಸಂಜೀವ ಕುಲಕರ್ಣಿ

ಅಮರ said...

ಶ್ರೀ,

ಸಕ್ಕತ್ ದಿನಗಳ ನಂತರ ಉತ್ತರಿಸುತಿದ್ದಿನಿ :)

ನೀವು ಹೇಳಿದ ಹಾಗೆ ಬರಹದಲ್ಲಿ ಸಂಗೀತದ ಬಗೆಗಿನ ಸೂಕ್ಷ್ಮ ವಿಚಾರಗಳನ್ನ ಪ್ರಸ್ತಾಪಿಸಿದ್ದಿರಾ ಮತ್ತೆ ನೀವು ಹಲವಾರು ರಾಗಗಳ ಬಗ್ಗೆ ಕರ್ನಾಟಿಕ್ ನಲ್ಲಿ ಯಾವುದು ಹಿಂದೂಸ್ಥಾನಿಯಲ್ಲಿ ಯಾವುದು ಎಂದು ಬರೆದಿದ್ದಿರಿ... ಅದರ ಜೋತೆ ಅವುಗಳ ಆಡಿಯೋ ಲಿಂಕ್ ಇದ್ದಿದ್ದರೆ ನಮ್ಮಂತವರಿಗೆ ಅನುಕೂಲ ಅವುಗಳ ಬಗ್ಗೆ ತಿಳಿಯಲು. ಮತ್ತೆ ಈ ಬ್ಲಾಗಿನ ಬಗ್ಗೆ ಕನ್ನಡ ಪ್ರಭದಲ್ಲಿ ಬಂದಿತ್ತು... :)

Sree said...

@ಸಂಜೀವ ಕುಲಕರ್ಣಿ
ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ, ಒಳ್ಳೆ ಮಾತುಗಳಿಗೆ ಥ್ಯಾಂಕ್ಸ್:)
ಕೈವಲ್ಯ ಕುಮಾರರ ಬಗ್ಗೆ ಗೊತ್ತಿರಲಿಲ್ಲ! ಹಿಂದುಸ್ತಾನಿ ಕಲಾವಿದರ ಬಗ್ಗೆ(ಪ್ರಸಿದ್ಧರಾದವ್ರು ಬಿಟ್ಟು) ಹೆಚ್ಚು ತಿಳಿದಿಲ್ಲ...
ಶ್ರೀ ನನ್ನ ಹೆಸ್ರಾದ್ರಿಂದ ಶ್ರೀ ರಾಗ ಅಂತ ಇಟ್ಟೆ:) ಕರ್ನಾಟಕ ಸಂಗೀತದ ಶ್ರೀ ಇಷ್ಟ, ಹಿಂದುಸ್ತಾನಿಯ ಶ್ರೀ ಕೇಳಿಲ್ಲ, ಕೇಳ್ತೀನಿ...

@ಅಮರ,
ಹೂ, ಈ ಬ್ಲಾಗನ್ನ ಸಂಗೀತ ಬಲ್ಲವರಿಗಾಗಿಯೋ ತಿಳಿಯದವರಿಗಾಗಿಯೋ exclusive ಆಗಿ ಬರೆದಿಲ್ಲದ ಕಾರಣ ಒಂದೊಂದು ಕಡೆ details ಹೆಚ್ಚಾಯ್ತು ಅನ್ನಿಸಬಹುದು... ಎಲ್ಲದಕ್ಕೂ ಒಟ್ಟಿಗೆ ವಿವರಣೆ ನೀಡಿದ್ರೆ ತಿಳಿಯದವರಿಗೆ ಅದು ತುಂಬಾ ಜಾಸ್ತಿ ಅನ್ನಿಸೋ ಭಯ ಇದೆ... ಈ ಪೋಸ್ಟಿನಲ್ಲಿ ಆಡಿಯೋ ಆಗ್ಲೇ ಉಪಯೋಗಿಸಿಬಿಟ್ಟಿದ್ದೆ, ಎಲ್ಲದಕ್ಕೂ ಹಾಕಿದ್ರೆ ವಿಷ್ಯ ತುರುಕಿದಂತೆ ಆಗುತ್ತೇನೋ ಅಂತ ಬಿಟ್ಟೆ. ಒಂದೊಂದು ಪೋಸ್ಟಿನಲ್ಲೂ ಒಂದು-ಎರಡಾದ್ರು ಸೂಕ್ಷ್ಮಗಳನ್ನ ವಿವರಿಸೋ ಪ್ರಯತ್ನ ಮಾಡ್ತೀನಿ, ಇವತ್ತು ಏನಪ್ಪ ಬರ್ದಿದಾಳೆ, ಅರ್ಥವಾಗಲ್ಲ ಅನ್ನಿಸಿದ್ದು ಇನ್ನೊಂದು ನಾಕು ಪೋಸ್ಟ್ ಕಳೆದಮೇಲೆ ಅರ್ಥವಾಗಬಹುದು, ನಿಧಾನವಾಗಿ ಹೆಜ್ಜೆ ಇಡೋಣ, ಏನಂತೀರ?:) ಮತ್ತೆ ನಿಮ್ಗೇನಾದ್ರೂ ಪ್ರಶ್ನೆಗಳು/ ಸಂಶಯಗಳು ಇದ್ರೆ ಇಲ್ಲಿ ಕೇಳಿ, ನಂಗೆ ಗೊತ್ತಿರೋ ಅಷ್ಟು ಉತ್ತರ/ವಿವರಣೆ ಕೊಡೋಕೆ ನಾ ಯಾವತ್ತೂ ರೆಡಿ:) ಹಾಗೇ ಎಲ್ಲಿ ತೊಡಕೆನ್ನಿಸ್ತು ಅಂತಲೂ ಹೇಳ್ತಿರಿ, ಮುಂದೆ ಬರಿಯೋವಾಗ ಗಮನವಿಟ್ಟುಕೊಳ್ತೀನಿ...

ಕನ್ನಡಪ್ರಭ- ಹಾ, ಆನ್ಲೈನ್ ಆವೃತ್ತಿಯಲ್ಲಿ ನೋಡಿದೆ, ಪ್ರಿಂಟ್ ಕಾಪಿ ಸಿಗ್ಲಿಲ್ಲ:(