ಶ್ರೀ ರಾಗ Sree Raaga
for those moments of melody that find their home in the heart
Tuesday, May 5, 2009
ಸಂಪ್ರದಾಯ ೦೯ - ಮುತ್ತುಸ್ವಾಮಿ ದೀಕ್ಷಿತರ ಕೃತಿಗಳ ಕಾರ್ಯಕ್ರಮ
Friday, May 16, 2008
ಸುಮ್ಮನೆರಡು ಸಾಲು
ninagende nelabaan... |
Tuesday, March 25, 2008
ಈ ವೀಕೆಂಡಿಗೆ ಒಂದಷ್ಟು ಕನ್ನಡ ಹಾಡುಗಳು, ನೃತ್ಯ, ಫ್ಯೂಶನ್ ಸಂಗೀತ
ಕಾಲೇಜು ಸ್ಪರ್ಧೆಗಳಲ್ಲಿ ಸಿಗುತ್ತಾ ಒಟ್ಟಾದ ಈ ತಂಡ ಈಗ ಪ್ರೊಫೆಶನಲ್ ಘಟ್ಟಕ್ಕೆ ಕಾಲಿಡುತ್ತಿದೆ. ಸುಗಮಸಂಗೀತ(ಕನ್ನಡ), ನೃತ್ಯ, ಫ್ಯೂಶನ್ - ಹೀಗೆ ಮೂರು ಪುಟ್ಟ ತಂಡಗಳು ಅಂದು ನಿಮ್ಮ ಮುಂದಿರುತ್ತವೆ. ಫ್ಯೂಶನ್ ತಂಡದ ಹುಡುಗರು ನನ್ನ ಅತ್ಮೀಯ ವಲಯಕ್ಕೆ ಸೇರಿದವ್ರಾದರಿಂದ ಇಲ್ಲಿ ಅವರ ಪರವಾಗಿ ನಿಮಗೆ ಆಹ್ವಾನ. ಬೆಂಗಳೂರಿನ ಶಾಸ್ತ್ರೀಯ ಸಂಗೀತದ ಶ್ರೋತೃಗಳಿಗೆ ಇವರ ಪರಿಚಯ ಇದ್ದೀತು: ಬಿ ಕೆ ರಘು - ವಯೊಲಿನ್, ಶಕ್ತಿಧರ್- ಬಾನ್ಸುರಿ, ಅಶ್ವಿನ್ - ಕೀಬೋರ್ಡ್, ಆದರ್ಶ್ ಶೆಣೈ - ತಬಲಾ, ಮಂಜುನಾಥ್ - ಡ್ರಮ್ಸ್, ಹಾಗೂ ಅದಮ್ಯ(ನನ್ನ್ ತಮ್ಮ) - ಮೃದಂಗ.
ಸುಗಮಸಂಗೀತದಲ್ಲಿ: ಚಿನ್ಮಯ್ ಆತ್ರೇಯಸ್, ಶೃತಿ, ಮಯೂರ್ ರಾಘವೇಂದ್ರ ಹಾಗೂ ಮೇಘನಾ ಕುಲಕರ್ಣಿ
ನೃತ್ಯದಲ್ಲಿ: ನಿಖಿಲಾ, ಸಿಂಧು ಜೆ., ಚೇತನಾ, ಸಿಂಧು, ಗೌರಿ, ಮೇಘನಾ.
ರೂ 49/-ರ ಟಿಕೆಟ್‍ಗಳು ದೊರೆಯುವ ಸ್ಥಳಗಳು:
ಜಯನಗರದ ಕ್ಯಾಲಿಪ್ಸೋ, ಶೆಣೈ ಮೆಡಿಕಲ್ಸ್
ಈ - ಮೈಲ್ ಮೂಲಕ ಟಿಕೆಟ್ ಕಾದಿರಿಸಬಯಸುವವರು ನಿಮ್ಮ ದೂರವಾಣಿ ಸಂಖ್ಯೆಯೊಂದಿಗೆ rhythmadamya at yahoo dot co dot inಗೆ ಮೈಲ್ ಕಳಿಸಿ.
ಕಾರ್ಯಕ್ರಮ ನಡೆಯುವ ಸ್ಥಳ: ’ಮಂಗಳ ಮಂಟಪ’
ಎನ್ ಎಂ ಕೆ ಆರ್ ವಿ ಕಾಲೇಜು
ಜಯನಗರ, ಬೆಂಗಳೂರು
ದಿನಾಂಕ: 30 ಮಾರ್ಚ್ 2008
ಸಮಯ: ಸಂಜೆ 6 ಘಂಟೆ
ಅಂದ ಹಾಗೆ ಈ ಬ್ಲಾಗ್ ಷುರು ಮಾಡೋವಾಗ ಹೆಸರಿಡೋಕೆ ಸುಮಾರು ತಲೆ ಕೆಡ್ಸ್ಕೊಂಡು ಕೊನೆಗೆ ’ನನ್ನ ಹಾಡು’ ಅಂತ ಇಟ್ಟ್‌ಬಿಟ್ಟೆ... ಅಂಥಾ ಕ್ರಿಯೇಟಿವ್ ಆಗೇನ್ ಇಲ್ಲ ಅನ್ನಿಸಿದ್ರೂ ಇನ್ನು ಯೋಚನೆ ಮಾಡೋಕೆ ಆಗದ್ ಸೋಮಾರಿತನದಲ್ಲಿ! ಆ ಹೆಸ್ರಲ್ಲಿ ಇನ್ನೊಂದು ಬ್ಲಾಗ್ ಇರೋದು ಈಚೆಗೆ ಗೊತ್ತಾಯ್ತು. ಬ್ಲಾಗ್‌ಲೋಕದ ತುಂಬಾ ಇರೋ ಶ್ರೀಗಳಿಂದ ನಾ ಐಡೆಂಟಿಟಿ ಕ್ರೈಸಿಸ್ ಎದುರಿಸೋದೇ ಸಾಕು, ನನ್ನ ಈ ಪುಟ್ಟ ಹೊಸ ಬ್ಲಾಗಿಗೆ ಆ ಪಾಡು ಬೇಡ ಅಂತ ಇದರ ಯು ಆರ್ ಎಲ್ - ಶ್ರೀ ರಾಗವನ್ನೇ ಹೆಸರಾಗಿಸ್ತಿದೀನಿ.
Wednesday, March 5, 2008
ಜೂಠೇ ನೈನಾ ಬೋಲೇ..., ಪಂ. ಸತ್ಯಶೀಲ್ ದೇಶಪಾಂಡೆ, ವರಾಳಿ
ಸರಿ, ಅದನ್ನ ಮತ್ತೆ ಮತ್ತೆ ಕೇಳೋಕೆ http://www.musicindiaonline.comನಲ್ಲಿ/ ಹುಡುಕಿದ್ದಾಯ್ತು. ಹಾಡಿನ ಪ್ರಾರಂಭಕ್ಕೆ, ಹಾಗೂ ಮಧ್ಯದಲ್ಲಿ ಬರೋ male voice ಪಂ. ಕುಮಾರ್ ಗಂಧರ್ವರ ಶಿಷ್ಯರೂ, ಪ್ರಸಿದ್ಧ ಸಂಗೀತಜ್ಞ ವಾಮನ್ ರಾವ್ ದೇಶಪಾಂಡೆಯವರ ಮಗನೂ ಆದ ಪಂಡಿತ್ ಸತ್ಯಶೀಲ್ ದೇಶಪಾಂಡೆಯವರದ್ದು ಅಂತ ಗೊತ್ತಾಯ್ತು. ಸಂಗೀತಪ್ರಿಯರಾದ ನನ್ನ ಬಾಸ್ - ಅನ್‌ಮೋಲ್, ನಾ ಕೆಲಸಕ್ಕೆ ಸೇರಿದ ಕೆಲದಿನಗಳಲ್ಲೇ ಇದನ್ನ ಕೇಳಿನೋಡು ಅಂತ ಪಂಡಿತ್‌ಜೀಯ ’ಕಹೇಂ’ ಸಿ ಡಿ ಕೈಗಿಟ್ಟಿದ್ದರು. ಅವರ ಮನೆಯಲ್ಲೇ ಸತ್ಯಶೀಲ್‌ರ ಸಂಗೀತ ಮೊದಲಬಾರಿಗೆ ಕೇಳೋ ಅವಕಾಶ ಸಿಕ್ಕಿದ್ದು.
ಇದು ೨-೩ ವರ್ಷದ ಹಿಂದಿನ ಮಾತು. ಇತ್ತೀಚೆಗೆ ಬಿಲಾಸ್‌ಖಾನಿ ತೋಡಿ ಹುಚ್ಚು ಹತ್ತಿಸಿಕೊಂಡು ತಿರುಗುತ್ತಿದ್ದಾಗ ಮತ್ತೆ ಈ ಹಾಡಿಗೆ revisit... ಹಿಂದೂಸ್ತಾನಿ ಸಂಗೀತ ಕಲಿತು, ಕೇಳಿ ಸಾಕಷ್ಟು ಅನುಭವವಿದ್ದ ಅನ್‌ಮೋಲ್‌ರ ಹತ್ತಿರ ಬಿಲಾಸ್‌ಖಾನಿಯ ಬಗ್ಗೆ ಮಾತಾಡ್ತಾ ಸತ್ಯಶೀಲ್ ಹಾಡಿದ್ದ ಈ ಹಾಡು ಅದೇ ರಾಗದ್ದಲ್ಲವಾ ಅಂತ confirm ಮಾಡಿಕೊಂಡಿದ್ದೆ. ಇದಾಗಿ ೨-೩ ತಿಂಗಳಾಗಿರಬಹುದು. ಅನ್‌ಮೋಲ್‌ರಿಂದ ಸತ್ಯಶೀಲ್‌ರ ಕಚೇರಿಗೆ ಆಹ್ವಾನ ಬಂತು. ಬೆಂಗಳೂರಿನ ಸ್ಮೃತಿನಂದನ್ ಸಭಾಂಗಣದಲ್ಲಿ ಮೊನ್ನೆ ಭಾನುವಾರ ಕಾರ್ಯಕ್ರಮ. ಮಧುವಂತಿ, ಯಮನ್ ಕಲ್ಯಾಣ್, ಕಾಮೋದ್, ಅಪರೂಪದ ರಾಗ ನಂದ್...ರಾಗಸುಧೆ ಹರಿದಿತ್ತು. ಕಚೇರಿಯ ನಂತರ ಪಂಡಿತ್‌ಜೀಯವರ ಜೊತೆ ಕೆಲವು ಸಮಯ ಕಳೆಯೋ ಅವಕಾಶ. ಗೆಳೆಯರೊಬ್ಬರ ಮನೆಯಲ್ಲಿ ಊಟ. ಅಲ್ಲಿ ಹೋಗುತ್ತಲೇ ಸತ್ಯಶೀಲ್ ಮತ್ತೆ ಸಂಗೀತದ ಮೂಡ್‌ಗೆ ಇಳಿದರು. ಅಂದು ಹಾಡಿದ್ದ ರಾಗಗಳನ್ನ ಮೆಲುಕು ಹಾಕ್ತಾ, ಬೇರೆ ಬೇರೆ ಸಂಗೀತಗಾರರ approachಗಳನ್ನ ವಿವರಿಸ್ತಾ, ಹಾಡ್ತಾ... ಗಂಧರ್ವಲೋಕ ತೆರೆದಿತ್ತು.
೩ ತಿಂಗಳ ಹಿಂದಿನ ಮಾತು ನೆನಪಿಸಿಕೊಂಡ ಅನ್‌ಮೋಲ್, ಸತ್ಯಶೀಲ್‌ರಿಗೆ ನನ್ನ ’ಜೂಠೆ ನೈನಾ ಬೋಲೆ’ ಪ್ರೀತಿಯ ಬಗ್ಗೆ ಹೇಳಿ, she wants to listen to your bilaskhani todi ಅಂದುಬಿಟ್ಟರು! ಮಗುವಿನಂತಹ ಮುಗ್ಧತೆಯ ಪಂಡಿತ್‌ಜೀ ತಕ್ಷಣ ಆ ಹಾಡಿನ ಪ್ರಾರಂಭದ ’ನೀಕೇ ಘೂಂ...’ ಷುರುಮಾಡಿಯೇ ಬಿಟ್ಟರು! ನನಗೆ ಸ್ವರ್ಗಕ್ಕೆ ಮೂರೇ ಗೇಣು!! ಆ ಖುಷಿಯಲ್ಲಿದ್ದಾಗಲೇ ’ಗಾವೋ’ ಅಂತ ನನಗೂ, ಅಲ್ಲೇ ಇದ್ದ ಅವರ ಮಗ ಸೃಜನ್‍ಗೂ ಒಂದೊಂದೇ ಸಾಲು ಹೇಳಿಕೊಡೋಕೆ ಷುರು ಮಾಡಿದ್ರು! ಸ್ವರ್ಗ ಕೈಯ್ಯಲ್ಲಿತ್ತು! ಇದಕ್ಕಿಂತ ಇನ್ನೇನು ಕೇಳಲಿ ಅಂದುಕೊಂಡೆ.
ಆದ್ರೆ ಅವತ್ತು ಪಂಡಿತ್‌ಜೀ ನನ್ನ ಸಂತಸದ ಮೇರೆಗಳನ್ನ ದಾಟಿಸ್ತೀನಿ ಅಂತ ನಿರ್ಧರಿಸಿಬಿಟ್ಟಿದ್ದರು! ಬಿಲಾಸ್‌ಖಾನಿ ತೋಡಿ ಮುಗೀತಿದ್ದ ಹಾಗೇ ’ಅಬ್ ಕುಛ್ ಕರ್ನಾಟಕೀ ಸುನಾವೋ’ ಅಂದ್ರು. ನಾನು ಪೆದ್ದುಪೆದ್ದಾಗಿ ’ಯಮನ್ ಕಲ್ಯಾಣಿ’? ಅಂದೆ. ಬೇಡ ’ಒರಿಜಿನಲ್ ಕರ್ನಾಟಕೀ’ ಹಾಡು ಅಂದ್ರು. ’ಶುಭಪಂತುವರಾಳಿ’ ಅಂದೆ. ಸರಿ ಅಂತಿದ್ದ ಹಾಗೇ ’ಅದು ನಿಮ್ಮ ಮಿಯಾ ಕಿ ತೋಡಿಗೆ ಸಿಮಿಲರ್ ಅನ್ಸುತ್ತೆ' ಅಂದೆ. 'ತುಮ್ ಲೋಗ್ ಸಿಮಿಲರ್ ಕ್ಯೂ ಗಾತೇ ಹೋ, sing some proper carnatic raag' ಅನ್ನುತ್ತಾ ನಮ್ಮ ತ್ಯಾಗರಾಜರ ಘನಪಂಚರತ್ನಗಳಲ್ಲಿ ನನ್ನ ಫೇವರಿಟ್ ಆದ ’ಕನಕನ ರುಚಿರಾ...’ ಹಾಡೋಕೆ ಪ್ರಾರಂಭಿಸಿಬಿಟ್ಟರು!! ಒಂದು ಕ್ಷಣ ದಿಗ್ಭ್ರಮೆಯಲ್ಲಿ ಕಳೆದುಹೋದೆ! ಸಾವರಿಸಿಕೊಳ್ತಾ ಸರಿ, ಆ ರಾಗದಲ್ಲೇ ಏನಾದ್ರು ಹಾಡ್ತೀನಿ ಹಾಗಾದ್ರೆ ಅಂದೆ. ಖುಷಿಯಿಂದ ಹೂ ಅಂದ್ರು. ಮುತ್ತುಸ್ವಾಮಿ ದೀಕ್ಷಿತರ ’ಮಾಮವ ಮೀನಾಕ್ಷೀ’ ಹಾಡುತ್ತಿದ್ದಂತೆ ಷಡ್ಜದಿಂದ ಪಂಚಮಕ್ಕೆ ಬರುವ ಜಲಪಾತದಂಥಾ ಬ್ರಿಗಾ ಸಂಚಾರ, ಗಾಂಧಾರದ ಸೂಕ್ಷ್ಮವಾದ ಕಂಪಿತಗಳನ್ನ ಆಸ್ವಾದಿಸ್ತಾ, ಮಗನಿಗೆ ಇದನ್ನ ಗಮನಿಸು, ಅದನ್ನ ಗಮನಿಸು ಅಂತ ಹೇಳ್ತಾ ಕೂತ ಪಂಡಿತ್‌ಜೀ ದೊಡ್ಡವರ ದೊಡ್ಡತನದ ಪ್ರತೀಕವಾಗಿದ್ದರು.
ಹಾಡಿ ಮುಗಿಸಿದಾಗಲೂ ನಮ್ಮ ಪಂಚರತ್ನಕೃತಿಯಬಗ್ಗೆ ಇನ್ನೊಂದು ಪದ್ಧತಿಯ ಅಷ್ಟು ಹಿರಿಯಕಲಾವಿದರ ಪ್ರೀತಿ ಅಚ್ಚರಿಯಲ್ಲಿ ಮುಳುಗಿಸಿತ್ತು! ಜೊತೆಗೇ ನಮ್ಮ ಕೃತಿಗಳ ಅದ್ಭುತ ಭಂಡಾರದ ಬಗ್ಗೆ ಹೆಮ್ಮೆಯೆನಿಸಿತ್ತು!!
compositionಗಳಿಗೆ ಅಷ್ಟು ಪ್ರಾಮುಖ್ಯ ನೀಡದ ಹಿಂದೂಸ್ತಾನಿ ಪದ್ಧತಿಯಲ್ಲಿ oral traditionನ ಮೇಲೇ ಅವಲಂಬಿತವಾಗಿ ಅಲ್ಲಲ್ಲಿ ಉಳಿಯುತ್ತಾ ಅಲ್ಲಲ್ಲಿ ನಶಿಸುತ್ತಾ ಹೋಗುತ್ತಿರುವ compositionಗಳನ್ನ ಹುಡುಕಿ, ಹಿರಿಯ ಸಂಗೀತಗಾರರಿಂದ ಹಾಡಿಸಿ, notation ಸಿಕ್ಕಲ್ಲಿ ಅದನ್ನು ಕಾಯ್ದಿಡುವ ದೊಡ್ಡ ಸಂಶೋಧನೆ-ಸಂಗ್ರಹಗಳ ಕೆಲಸವನ್ನ ಸತ್ಯಶೀಲ್‌ರು ಮುಂಬೈನಲ್ಲಿರುವ ತಮ್ಮ ’ಸಂವಾದ್ ಫೌಂಡೇಷನ್’ನ ಮೂಲಕ ಮಾಡ್ತಿದಾರೆ (ಕೃತಿಗಳ ಬಗ್ಗೆ ಅವರ ಆಸಕ್ತಿಯ ಮೂಲ ಇದೇ ಇರಬಹುದು!). ಇಲ್ಲಿ ಸುಮಾರು ೮೦೦೦ಗಘಂಟೆಗಳಷ್ಟು ಧ್ವನಿಮುದ್ರಿಕೆಗಳೂ, ೩೦೦೦ದಷ್ಟು manuscript notationಗಳೂ ಇವೆಯಂತೆ. ಮಾಹಿತಿಗಾಗಿ http://www.satyasheel.com/ ನೋಡಿ.
ಅಂದಹಾಗೆ ಲೇಕಿನ್‌ನ ಹಾಡನ್ನ ’ಝೂಟೇ ನೈನಾ’ ಅಂದುಕೊಂಡಿದ್ದೆ, ಅದು ’ಜೂಠೇ ನೈನಾ’(ಜೂಠಾ=ಎಂಜಲು) , ಹೊರಗೆಲ್ಲೋ ಅಲೆದು ಬಂದು ಕತ್ತಲ ರಾತ್ರಿಯ ಚಂದ್ರನಂತೆ ಮಿಂಚುತ್ತಿರೋ ಮಳ್ಳ ಕಣ್ಣುಗಳು ಅಂತ ಪಂಡಿತ್‌ಜೀ ವಿವರಿಸಿದ್ರು!:)
[P.S.,: ಲೇಕಿನ್‌ನ ಹಾಡಿಗೆ ಹಾಗೂ ’ಕನಕನರುಚಿರಾ’ಗೆ musicindiaonlineನ ಲಿಂಕ್‌ಗಳನ್ನ ಕೊಟ್ಟಿದ್ದೀನಿ, ಹಾಡಿನ ಮೇಲೆ ಕ್ಲಿಕ್ ಮಾಡಿ ಕೇಳಬಹುದು. ಇಂದಿನ ಪ್ರಮುಖ ಸಂಗೀತಗಾರರ ಸಾಲಿನಲ್ಲಿರೋ ಸಂಜಯ್ ಸುಬ್ರಮಣ್ಯಂ ಹಾಗೂ ಉನ್ನಿಕೃಷ್ಣನ್ ಒಟ್ಟಿಗೆ ಹಾಡಿರುವ ’ಕನಕನ ರುಚಿರಾ’ ತುಂಬಾ ಚೆನ್ನಾಗಿದೆ. ಅದನ್ನ ಹುಡುಕ್ತಿದ್ದೆ, ಸಿಗಲಿಲ್ಲ. ಅದರ ಬದಲು ನಮ್ಮ ಭೀಷ್ಮ ಪಿತಾಮಹ ಶೆಮ್ಮಂಗುಡಿಯವರ ಹಾಡಿಕೆಯಲ್ಲಿ ಕೇಳಿಸ್ತಿದ್ದೀನಿ. ಮೇಲೆ ಹೇಳಿರೋ ಡ್ಯೂಯೆಟ್ ಸಿಕ್ಕರೆ ಕೇಳಿ]
Sunday, February 17, 2008
ಫೆಬ್ರವರಿ 9, 2008ರ ಟಿ ಎಮ್ ಕೃಷ್ಣ ಕಚೇರಿ : ಸಂಪ್ರದಾಯ, creative ಸಾಧ್ಯತೆಗಳು
ಅಂತೂ ಕಚೇರಿಯ ದಿನ ಬಂದೇಬಿಡ್ತು. ಬೆಂಗಳೂರಿನ ಈ ಮೂಲೆಯಿಂದ ಆ ಮೂಲೆಗೆ ಕಿಟಿಪಿಟಿ ಟ್ರಾಫಿಕ್ ದಾಟುತ್ತಾ ದಡಬಡಾಯಿಸಿದಾಗ 5.25. ಕಚೇರಿ ಷುರು ಆಗೋಕೆ ಆಹ್ವಾನಪತ್ರಿಕೆಯ ಪ್ರಕಾರ ಇನ್ನೂ ಐದು ನಿಮಿಷ. ಒಳಗೆ ಕಾಲಿಟ್ಟರೆ ಸಾವಿರ ಚಿಲ್ಲ್ರೆ ಸಾಮರ್ಥ್ಯದ ಸಭಾಂಗಣ ಕಚೇರಿ ಷುರು ಆಗೋಕೆ ಮುಂಚೆಯೇ ಭರ್ತಿ! ತಡಕಾಡುತ್ತಾ ಕುರ್ಚಿಗಳ ಮಧ್ಯ ಮೆಟ್ಟಿಲೊಂದರ ಮೇಲೆ ನನ್ನ ರಾಜ್ಯಸ್ಥಾಪನೆ ಮಾಡಿ ಕೂತೆ. ಚಾರುಲತಾ ಬದಲು ಚೆನ್ನೈನ ಅಮೃತಾ ಮುರಳಿ ವಯೊಲಿನ್‍ನಲ್ಲಿದ್ದರು.
ಅಪರೂಪವಾಗಿ ಕೇಳಿಬರೋ ಮುತ್ತುಸ್ವಾಮಿ ದೀಕ್ಷಿತರ ಕೃತಿ ಶ್ರೀರಂಜನಿ ರಾಗದ ಶ್ರೀದುಂದುರ್ಗೇ ಸೂಪರಾಗಿ ಹಾಡಿದ್ರು, ರಾಗಾಲಾಪನೆ out of the world ಅನ್ನಿಸ್ತು. ಸರಿ, ಸರಿ, ಚಾನೆಲ್ ಬದಲಾಯಿಸ್ಬೇಡಿ, ಇಲ್ಲೀಗ ಕಛೇರಿಯ ವಿಮರ್ಶೆಯನ್ನೋ ಅಥವಾ ವರದಿಯನ್ನೋ ಬರಿಯೋದಿಲ್ಲ!:) ಅವತ್ತು ಕಚೇರಿ ಕೇಳಿ ಹೊರಬಂದಮೇಲೂ ತಲೆಯಲ್ಲಿ/ಕಿವಿಯಲ್ಲಿ ಉಳಿದ ವಿಷಯಗಳಲ್ಲೊಂದು ಇಲ್ಲಿ ಹಂಚಿಕೊಳ್ತೀನಿ.
ಈಗ ಬರೀತಿರೋ ನಾಕು ಸಾಲಿನ ಮಾಹಿತಿ ಕರ್ನಾಟಕ ಸಂಗೀತದ ಪರಿಚಯವಿಲ್ಲದವರಿಗೆ ಮಾತ್ರ : ವಾಗ್ಗೇಯಕಾರರು ರಚಿಸಿಕೊಟ್ಟಿರೋ ಕೃತಿಯ ಚೌಕಟ್ಟಿಗೆ ಪೂರಕವಾಗಿಯೂ ಕಲಾವಿದರ ಸೃಜನಶೀಲತೆಗೆ ಇಂಬು ನೀಡೋಹಾಗೆ ಮನೋಧರ್ಮ ಪ್ರಕಾರಗಳಿರೋದು ಕರ್ನಾಟಕ ಸಂಗೀತದ ವಿಶಿಷ್ಟತೆ. ಇಂಥಾ ಮನೋಧರ್ಮ ಪ್ರಕಾರಗಳಲ್ಲಿ ಒಂದು ನೆರವಲ್. ಕೃತಿಯ ಸಾಹಿತ್ಯದ ಒಂದು ಸಾಲನ್ನು ಆಯ್ದು ರಾಗಕ್ಕನುಗುಣವಾಗಿ ವಿವಿಧ ಸಂಚಾರಗಳನ್ನ ಬಳಸ್ತಾ ವಿಸ್ತರಿಸಿ ಹಾಡೋದೇ ನೆರವಲ್. ಸಾಹಿತ್ಯಾಕ್ಷರದ ಸ್ಥಾನಪಲ್ಲಟ ಮಾಡದೇ ಆ ಚೌಕಟ್ಟಿನಲ್ಲೇ ರಾಗದ ಸಾಧ್ಯತೆಗಳನ್ನ ಹುಡುಕಿ ನಡೆಯೋ ಮೋಜಿನ ಹಾದಿ ನೆರವಲ್‍ದು.
ಅವತ್ತಿನ ಕಚೇರಿಯಲ್ಲಿ ಮೈನ್ ಐಟೆಮ್ ಮಧ್ಯಮಾವತಿಯ ’ಪಾಲಿಂಚು ಕಾಮಾಕ್ಷಿ’(ಶ್ಯಾಮಾಶಾಸ್ತ್ರಿಯವರ ರಚನೆ). ವಿಸ್ತಾರವಾಗಿ ಆಲಾಪನೆ ಮಾಡಿ ಕೃತಿ ಹಾಡಿ ವಾಡಿಕೆಯಂತೆ ಮೊದಲ ಕಾಲ(speed)ದಲ್ಲಿ ನೆರವಲ್ ತೊಗೊಂಡ್ರು. ಅದು ಮುಗೀತಿದ್ದಹಾಗೇ ಪಟ್ ಅಂತ ಮೊದಲಕಾಲದಲ್ಲಿ ಸ್ವರಪ್ರಸ್ತಾರ ಷುರು ಮಾಡಿಬಿಟ್ಟಾಗ ಅಯ್ಯೋ ಇದೇನು ಇವತ್ತಿನ ಭೋರ್ಗರೆಯೋ ಮನೋಧರ್ಮಕ್ಕೆ ಎರಡನೇ ಕಾಲದ ನೆರವಲ್ ಇರಬೇಕಿತ್ತಲ್ಲ ಅನ್ನಿಸ್ತು. ಅಮೃತಾ ಮುರಳಿ ಇವರ ಸ್ವರಪ್ರಸ್ತಾರಕ್ಕೆ ಪೂರಕವಾಗಿ ಸ್ವರಹಾಕಿ ಬಿಟ್ಟಾಗ ಮತ್ತೊಂದು ಶಾಕ್! ಎರಡನೇ ಕಾಲದ ನೆರವಲ್ ಹಾಡಿಬಿಡೋದೇ! ಅದಕ್ಕೆ ಮತ್ತೆ ಅಮೃತಾ ಉತ್ತರ. ಮತ್ತೆ ಒಂದನೇ ಕಾಲದ ಸ್ವರಪ್ರಸ್ತಾರ, ಮತ್ತೆ ಎರಡನೇ ಕಾಲದ ನೆರವಲ್ ಹೀಗೆ ವೇಗದ - ನಿಧಾನಗತಿಯ ಸಾಹಿತ್ಯ- ಸ್ವರ ವಿಸ್ತರಣೆಗಳು ಒಂದರ ಪಕ್ಕಒಂದು ಸಾಲಾಗಿ ಬರುತ್ತಾ ಹೊಸ ಅನುಭವ-ಸಾಧ್ಯತೆಗಳನ್ನ ತೆರೆದಿಟ್ಟವು. ಅರ್ಜುನ್‍ಕುಮಾರ್-ಸುಕನ್ಯಾ ಹುರುಪಿನ ತನಿ ಆವರ್ತನ ಕೇಳಿ ಹೊರಬಂದಾಗ ನೆರವಲ್ ಹಾಡಿಕೆಯ ವಾಡಿಕೆ, ಅದರಲ್ಲಿ ಇರುವ ಸಾಧ್ಯತೆಗಳು, ಸಂಪ್ರದಾಯ, ಅದರಲ್ಲಿರುವ collective intelligence, ಅದರೊಳಗೇ ಅಡಗಿರುವ ಹತ್ತುಹಲವು ಹೊಸ ಸೃಜನಾತ್ಮಕ ಹಾದಿಗಳು, ಪ್ರತೀ ಕಚೇರಿಯಲ್ಲೂ reaffirm ಆಗುತ್ತಾ ಹೋಗುವ ಕೃಷ್ಣಭಕ್ತಿಯ ಕಾರಣಗಳಾಗಿ ಹೊಳೆದವು!
Tuesday, January 29, 2008
ಎಂ ಎಸ್ ಬದುಕು - ಒಂದು ಸುಂದರ ಕಥೆ
"At the time of the UN concert, the couple stayed at the apartment of an Esso oil company, another Mylapore networker. After lunch one day MS began singing for the small gathering of friends who had assembled in the apartment. To their dismay, repair works in the adjoining apartment provided a staedy accompaniment of unmusical sounds such as hammer knocks and metal sawinf. The apartment owner was embarrassed but said he was helpless. MS alone seemed unconcerned and went on singing. A few minutes later, the repair noises suddenly ceased and two helmeted American handymen appeared at the apartment door. 'Can't understand a thing,' they said, 'but it's very touching. May we listen?' That was perhaps MS's finest hour in America."
ಟಿ ಜೆ ಎಸ್ ಜಾರ್ಜ್ ಬರೆದಿರುವ ’MS: A Life in Music' ಪುಸ್ತಕದ ಸಾಲುಗಳಿವು. ಎಂ ಎಸ್ ತಮ್ಮ ಯೌವ್ವನದ ದಿನಗಳಲ್ಲಿ ಮತ್ತೊಬ್ಬ ಪ್ರಚಂಡ ಕಲಾವಿದ ಜಿ ಎನ್ ಬಿಯವರಿಗೆ ಬರೆದ ಪ್ರೇಮಪತ್ರಗಳ ಉಲ್ಲೇಖದಿಂದ ಸುದ್ದಿಯಾಗಿದ್ದ ಈ ಪುಸ್ತಕವನ್ನ ತುಂಬಾ ದಿನಗಳಿಂದ ಓದ್‌ಬೇಕು ಅಂದ್ಕೋತಿದ್ದೆ. ನನ್ನ ಗುದ್ದಾಟದ ಪಾರ್ಟ್‌ನರ್ ಗೆಳತಿ ಉಡುಗೊರೆಯಾಗಿ ಈ ಪುಸ್ತಕವನ್ನೇ ಕೈಗಿಟ್ಟಾಗ ನನ್ನ ಸೋಮಾರಿತನಕ್ಕೆ ಒಂದು ಬ್ರೇಕ್ ಕೊಡಬೇಕಾಯ್ತು!
ಮಧುರೈನ ಸೀಮಿತ ಪರಿಸರದಲ್ಲಿ ತಂಬೂರಿಯ ಶ್ರುತಿಯೊಂದಿಗೆ ಆಡುತ್ತಾ ಬೆಳೆಯುವ ಪುಟ್ಟ ಎಂ ಎಸ್, ಹತ್ತು ವರ್ಷದ ಪೋರಿ ಗ್ರಾಮಫೋನ್ ಹೀರೊಯಿನ್ ಆದದ್ದು, ಆ ವಯಸ್ಸಿಗೆ, ಅಂದಿನ ಕಾಲಕ್ಕೆ, ನಮಗೆಲ್ಲ ಪರಿಚಯವಿರೋ ಎಂ ಎಸ್ ಅವರ ಸೌಮ್ಯ ವ್ಯಕ್ತಿತ್ವಕ್ಕೆ ಅಚ್ಚರಿಯೆನಿಸೋ ಅಷ್ಟು ದಿಟ್ಟ ನಿರ್ಧಾರಗಳು... ಬದುಕಿನ ಹಾದಿ ತನ್ನ ಕೈಮೀರುತ್ತಿದೆಯೆನಿಸಿದಾಗ ರಾತ್ರೋರಾತ್ರಿ ರೈಲು ಹತ್ತಿ ಚೆನ್ನೈನಲ್ಲಿಳಿದುಬಿಡುವ ದಿಟ್ಟತನ-ಮುಗ್ಧತೆಗಳ ಅದ್ಭುತ ಸಮ್ಮಿಳನ... ಮಧುರೈನ ದೇವದಾಸಿಕುಟುಂಬದಲ್ಲಿ ಬೆಳೆದ ಹುಡುಗಿ ಮದ್ರಾಸಿನ ಸಂಗೀತಸಾಮ್ರಾಜ್ಞಿಯಾಗೋದರ ಜೊತೆ ಐಯ್ಯರ್ ಐಕಾನ್ ಆಗಿ ರೂಪಾಂತರಗೊಂಡದ್ದು... ದೇಶಾದ್ಯಂತ ಕಚೇರಿಗಳು, ವಿದೇಶಪ್ರವಾಸಗಳು, ವಿವಿಧಕ್ಷೇತ್ರಗಳ ಘಟಾನುಘಟಿಗಳ ಸಂಪರ್ಕ,ಪ್ರಶಸ್ತಿ-ಪುರಸ್ಕಾರಗಳು...ಎಲ್ಲದರ ನಡುವೆ ಸಂಗೀತವನ್ನ ಭಕ್ತಿಯ ಅಭಿವ್ಯಕ್ತಿಯಾಗಿ ಆರಾಧಿಸುತ್ತ ಕಡೆತನಕ ಮುಗ್ಧತೆಯ ಪ್ರಶಾಂತ ದ್ವೀಪವಾಗಿಯೇ ಉಳಿದ ಎಂ ಎಸ್... ಪುಸ್ತಕ ಓದಿಸಿಕೊಳ್ತಾ ಹೋಯ್ತು.
ಒಣಜೀವನಚರಿತ್ರೆಯಾಗಿಸದೇ, ಅಂದಿನ ಸಾಮಾಜಿಕ, ಸಾಂಸ್ಕೃತಿಕ ಪರಿಸರಗಳನ್ನ, ಟ್ರೆಂಡ್‌ಗಳನ್ನ, ಬದಲಾವಣೆಗಳನ್ನ ತೆರೆದಿಡುತ್ತಾ, ಅವುಗಳ ಹಿನ್ನೆಲೆಯಲ್ಲಿ ಎಂ ಎಸ್ ಕಥೆ ಹೇಳುತ್ತಾ ಸಾಗುವ ಜಾರ್ಜ್ ಶೈಲಿ ಅಪ್ಯಾಯಮಾನವೆನಿಸ್ತು. ಇಂದಿನ ಕಲಾವಿದರ ಬಗ್ಗೆ ಬರಿಯುವಾಗ ಸ್ವಲ್ಪ ’ಹಿಂದೊಂದು ಚೆಂದದ ಕಾಲವಿತ್ತು’ ಮೋಡ್‌ಗೆ ಜಾರುತ್ತಾರೆ ಎನಿಸಿದರೂ ಈ ಪುಸ್ತಕ ಕಲ್ಚರಲ್ ಹಿಸ್ಟರಿ ಅಧ್ಯಯನಕ್ಕೆ ಒಂದು ಅಮೂಲ್ಯ ಕೊಡುಗೆ ಅನ್ನೋದರಲ್ಲಿ ಸಂಶಯ ಇಲ್ಲ.
ಜಿ ಎನ್ ಬಿ-ಎಂ ಎಸ್ ಅಧ್ಯಾಯ ಎಂ ಎಸ್ ಬಗೆಗಿನ ಗೌರವಕ್ಕೆ ಮೆರುಗು ನೀಡಿತೇ ಹೊರತು ಯಾವುದೇ ಚೀಪ್ ಗಾಸಿಪ್‌ನ ಹಾದಿ ತುಳಿದಿಲ್ಲ. ಅದನ್ನ ವಿವಾದಕ್ಕೆ ತಿರುಗಿಸಿದವರ, ಹೀಗೆಲ್ಲಾ ಬರೀತಾರಾ, ಇವೆಲ್ಲ ಬರೀಬೇಕಾ ಅಂದವರ ಬಗ್ಗೆ ಏನ್ ಹೇಳ್ಬೇಕೊ ಗೊತ್ತಿಲ್ಲ! ನನಗಂತೂ ಎಂ ಎಸ್ ಜೀವನದ ಈ ಅಧ್ಯಾಯದಲ್ಲಿ ಎದ್ದುಕಾಣೋ ಅವರ ಭಾವತೀವ್ರತೆ, ಆಮೇಲಿನ ನಿರ್ಧಾರದ ಧೃಡತೆ ಅವರು ಎಂಥಾ Strong Woman ಆಗಿದ್ದರು ಅನ್ನೋದನ್ನ ಅರ್ಥ ಮಾಡ್ಕೊಳ್ಳೋದಿಕ್ಕೆ ಅತ್ಯವಶ್ಯ ಅನ್ನಿಸ್ತು, ಎಂ ಎಸ್ ಮನಸ್ಸಿಗೆ ಇನ್ನೂ ಹತ್ತಿರ ಅನ್ನಿಸಿದ್ರು, ಇನ್ನೂ ಎತ್ತರ ಅನ್ನಿಸಿದ್ರು!
ಎಂ ಎಸ್ ಬಗೆಗಿನ ಪುಸ್ತಕ ಅಂದಮೇಲೆ ಅವರ ದಿವ್ಯಕಳೆಯ ಫೋಟೋಗಳೂ ಇದ್ದೇ ಇವೆ. ಒಟ್ಟಿನಲ್ಲಿ ಕಲೆ-ಸಂಸ್ಕೃತಿಗಳಲ್ಲಿ ಆಸಕ್ತಿ ಇರೋವ್ರು ಓದಲೇಬೇಕಾದ ಪುಸ್ತಕ.
2004ರಲ್ಲಿ ಹೊರಬಂದ ಈ ಪುಸ್ತಕ ಹಾರ್ಪರ್ ಕಾಲಿನ್ಸ್ ಹಾಗೂ ಇಂಡಿಯಾ ಟುಡೇ ಸಮೂಹದ ಪ್ರಕಟಣೆ.
Sunday, January 27, 2008
ಹೊಸ ಹಾಡು
ಹಲವು ಸಲ ನಾವು ಕೇಳಿದ್ ಹಾಡು, ನೋಡಿದ್ ನೋಟ, ಓದಿದ್ ಸಾಲು ದುಂಬಿಯಂತೆ ಮನಸ್ಸಲ್ಲಿ ಗುಯ್ಗುಡ್ತಾ ಇರತ್ತೆ. ಬೆಳಿಗ್ಗೆ ಕೇಳಿದ ಯಾವ್ದೋ ಟಪ್ಪಾಂಗೂಚಿ ಹಾಡು ರಾತ್ರಿ ವರೆಗೂ ಗುನುಗಿ ಮನೆಯವರಿಗೆಲ್ಲಾ ತಲೆಚಿಟ್ಟ್ ಹಿಡ್ಸೋದ್ರಲ್ಲಿ ನಾನು ಎಕ್ಸ್‌ಪರ್ಟು! ಹೀಗೆ ಕಾಡೋ ಕೆಲವು ಹಾಡುಗಳಿಗೆ, ಸಂಗೀತಸಾಗರದಲ್ಲಿ ನನ್ನ ಬೊಗಸೆಗೆ ಸಿಗುವ ಕೆಲವು ಹನಿಗಳಿಗೆ ಇಂದಿನಿಂದ ಇಲ್ಲೊಂದು ಪುಟ್ಟಮನೆ. ಕಚೇರಿಗಳು, ಕಲಾವಿದರು, ಪುಸ್ತಕಗಳು... ನನ್ನ ಮನದ ಬಾಗಿಲು ತಟ್ಟೋ ಎಲ್ಲ ಸ್ವರಗಳಿಗೆ ಇಲ್ಲಿ ಅಭಿವ್ಯಕ್ತಿ.
ಅಮ್ಮನ ಮಡಿಲಲ್ಲಿ ಇಳಿದ ದಿನದಿಂದ ಸಂಗೀತದ ಸಾಂಗತ್ಯ... ಅಪ್ಪನ ’ವಂದೇಮಾತರಂ’ಗೆ ತೊದಲುನುಡಿಗಳ ಹಿಮ್ಮೇಳ... ಹನ್ನೆರಡರ ಪುಟ್ಟ ಹೆಜ್ಜೆಗಳಿಂದ ಪ್ರೀತಿಯ ಗುರುಗಳ ಮಾರ್ಗದರ್ಶನ... ತಮ್ಮನ ಮೃದಂಗಕ್ಕೆ ನನ್ನ ಸರಿಗಮ... ಗೆಳೆಯರೊಂದಿಗೆ ಗುದ್ದಾಟಕ್ಕೆ ರಾಗ-ತಾಳಗಳು raw material... ಈ ನಂಟಿಗೆ ಇಲ್ಲಿ ನೀವೀಗ ಈಡು...
ನೀನು ಸಂಗೀತದ್ ಬಗ್ಗೆ ಯಾಕೆ ನಿನ್ನ ಬ್ಲಾಗ್‌ನಲ್ಲಿ ಬರೀಬಾರದು ಅಂತ ಕೇಳಿ, ಕಾಡಿಸಿ-ಪೀಡಿಸಿ ಸುಸ್ತಾದ ಸ್ನೇಹಿತರಿಗೆಲ್ಲ ಮನದಾಳದ ಥಾಂಕ್ಯೂ! ತ್ಯಾಗರಾಜರ ಆರಾಧನೆ ಇವತ್ತು.ಇದಕ್ಕಿಂತ inspiration ಇನ್ನೇನು ಬೇಕು ಅಂತ ಇವತ್ತು ಇಲ್ಲಿ ಗುದ್ದಲಿ ಪೂಜೆ ಮಾಡಿಬಿಟ್ಟಿದೀನಿ. ಈಗ ಅನುಭವಿಸಿ ನಿಮ್ಮ ಕರ್ಮಫಲ!:))